ಪುತ್ತೂರು: 2023-24ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡ ವಿಷಯ ದಲ್ಲಿ ಶೇ.100 ಅಂಕ ಪಡೆದ ಮತ್ತು 10ನೇ ತರಗತಿಯಲ್ಲಿ 605ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇಂದು ಪ್ರಯತ್ನ ಮಾಡಿದರೆ ಎನೂ ಮಾಡಬಹುದು ಎಂಬುದಕ್ಕೆ ಉದಾಹರಣೆ ನಮ್ಮ ಸಹಾಯಕ ಕಮೀಷನರ್ ಜುಬಿನ್ ಮೋಹಪಾತ್ರ. ನಾನು ಕೂಡಾ ತುಂಬಾ ಜನರನ್ನು ಟ್ರಸ್ಟ್ ಮೂಲಕ ಐಎಎಸ್ ಪರೀಕ್ಷೆಗೆ ಪ್ರೋತ್ಸಾಹ ನೀಡಿದ್ದೆ. ಆದರೆ ಅವರು ಯಾರು ಕೂಡಾ ಪಾಸ್ ಆಗಿಲ್ಲ. ಆದರೆ ಅವರೆಲ್ಲ ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ಇವತ್ತು ಉತ್ತಮ ಸರಕಾರಿ ಕೆಲಸದಲ್ಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕನಸು ಹಲವು ಇರುತ್ತದೆ. ಆದರೆ ಅದನ್ನು ಛಲದಿಂದ ಪ್ರಯತ್ನ ಪಟ್ಟಾಗ ಅದನನ್ನು ಸಾಧಿಸಲಾಗದಿದ್ದರೂ ಮತ್ತೊಂದು ಉತ್ತಮ ಸಾಧನೆ ಮಾಡಬಹುದು. ಶ್ರಮ, ಪ್ಲಾನಿಂಗ್, ಸಿನ್ಸಿಯಾರ್ಟಿ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದ ಅವರು ಕನಸು ಕಾನುವ ಜೊತೆಗೆ ಪ್ರಾಮಾಣಿಕತೆಯು ಬೇಕು ಎಂದರು.
ಅವಕಾಶ ತುಂಬಾ ಇದೆ. ಗುರಿ ನಿಮ್ಮಲ್ಲಿರಲಿ:
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಇಂದಿನ ವಿದ್ಯಾರ್ಥಿಗಳು ತುಂಬಾ ಯಂಗ್ ಇದ್ದೀರಿ. ನೀವು ಯಾವತ್ತೂ ಕೂಡಾ ಸ್ಪೂರ್ತಿಯಲ್ಲಿ ಇರಬೇಕು. ನೀವು ಐಎಎಸ್, ಐಪಿಎಸ್ ಮಾಡಲೇ ಬೇಕೆಂದಿನಿಲ್ಲ. ನಿಮ್ಮಲ್ಲಿ ಗುರಿ ಇರಲಿ. ಅವಕಾಶ ತುಂಬಾ ಇದೆ ಎಂದರು. ಕಷ್ಟಪಟ್ಟು ಶ್ರಮ ಹಾಕಿದರೂ ಒಂದೋಂದು ಬಾರಿ ಅಪೇಕ್ಷೆಗೆ ತಕ್ಕಂತೆ ಫಲಿತಾಂಶ ಬರುವುದಿಲ್ಲ. ಆಗ ಅದಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಆತ್ಮವಿಶ್ವಾಸ ಪರಿಹಾರ ಆಗುತ್ತದೆ. ಏನೆ ಸಾಧನೆ ಮಾಡುವುದಾದರು ಮೊದಲು ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್..ಆರ್. ಮಾತನಾಡಿ, ಸಾಧನೆಗೆ ತಾಳ್ಮೆ ಮುಖ್ಯ, ತಾಳ್ಮೆ ಇದ್ದಾಗ ಗುರಿ ಸಾಧಿಸಬಹುದು. ಕಷ್ಟಪಟ್ಟು ಓದಿ ಜೀವನದಲ್ಲಿ ಎನಾದರೂ ಒಂದು ಸಾಧನೆ ಮಾಡಿ. ಪುಸ್ತಕಗಳನ್ನು ಪ್ರೀತಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಕನ್ನಡದ ಸೇವೆಗಾಗಿ ಸಾಹಿತ್ಯ ಪರಿಷತ್‌ನಿಂದ ಹಲವಾರು ಕಾರ್ಯಕ್ರಮ ನಿರಂತರ ನಡೆಯುತ್ತದೆ. ವಿದ್ಯಾರ್ಥಿಗಳು ಇದರಲ್ಲಿ ಸದಾ ಪಾಲ್ಗೊಳ್ಳಬೇಕು. ಕನ್ನಡಕ್ಕೆ ನಿತ್ಯ ಎಲ್ಲರ ಸಹಕಾರವಿರಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಚಾರದ ಕಾರ್ಯಗಾರವನ್ನು ಡಾ. ಮೈತ್ರಿ ಭಟ್ ಅವರು ನಡೆಸಿಕೊಟ್ಟರು.
ಸಾಧಕ ವಿದ್ಯಾರ್ಥಿಗಳಿಗೆ ‘ಕನ್ನಡ ಪ್ರತಿಭೆ ಪ್ರಶಸ್ತಿ’:
ಕನ್ನಡ ಎಮ್ ಎ ಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ಸೌಜನ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕನ್ನಡದಲ್ಲಿ ಶೇ. 100 ಅಂಕ ಪಡೆದ 19 ಹುಡುಗರು, 87 ಹುಡುಗಿಯರು ಸೇರಿದಂತೆ ಒಟ್ಟು 105 ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯಲ್ಲಿ 515 ರ ಮೇಲ್ಪಟ್ಟು ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಶಾ ಬೆಳ್ಳಾರೆ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಮುಖ್ಯಗುರು ನಾರಾಯಣ ರೈ ಕುಕ್ಕುವಳ್ಳಿ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಉಪನ್ಯಾಸಕರಾದ ಕಾರ್ತಿಕ್ ಕುಮಾರ್, ಮಧುರ, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಉಪನ್ಯಾಸಕಿ ನಾಗಶ್ರೀ ಅತಿಥಿಗಳಿಗೆ ಪುಸ್ತಕ ಹಾರವನ್ನು ಸಮರ್ಪಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನ್ ಬೋಗ್ ಸ್ವಾಗತಿಸಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಅಗಮ್ಯ ದೇವರನ್ನು ಸ್ತುತಿಸಿದರು. ರೇಣುಕಾ ಮತ್ತು ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.