ಪುತ್ತೂರು: ಇಂದು ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯುವುದಕ್ಕೆ ಮತ್ತು ಕನ್ನಡದಲ್ಲೇ ಸಂದರ್ಶನ ಎದುರಿಸುವುದಕ್ಕೆ ಅವಕಾಶವಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಳ್ಳಬೇಕು. ಆಡಳಿತ ವ್ಯವಸ್ಥೆಗೆ ನಮ್ಮನ್ನು ನಾವು ಒಡಮೂಡಿಸಿಕೊಂಡು ಉತ್ಕೃಷ್ಟ ರಾಷ್ಟ್ರ ನಿರ್ಮಾಣದಲ್ಲಿ ಭಾಗಿಗಳಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು.

ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭ ‘ಉದ್ಘೋಷ=2024’ ೨ನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳಿಂದ ದೂರ ಸರಿಯದೆ ರಾಷ್ಟ್ರಭಕ್ತರಾಗಿ ಬೆಳೆಯಬೇಕು. ನಮ್ಮ ಸಾಧನೆ ನಮ್ಮ ಊರಿಗೆ ಹಾಗೂ ಹೆತ್ತವರಿಗೆ ಹೆಮ್ಮೆ ತರುವಂತಿರಬೇಕು. ಆಯಾ ಕ್ಷಣದಲ್ಲಿ ಮನಸ್ಸಿನಲ್ಲಿ ಹುಟ್ಟುವ ಆಕಾಂಕ್ಷೆಗಳನ್ನು ಆದಷ್ಟು ಮುಂದೂಡುವ ಪ್ರಯತ್ನ ಮಾಡಿದಾಗ ಸಾಧನೆಗೆ ಅವಕಾಶ ದೊರಕುತ್ತದೆ. ಆದರೆ ನಿರ್ವಹಿಸಬೇಕಾದ ಜವಾಬ್ದಾರಿ ಹಾಗೂ ಕಾರ್ಯಗಳನ್ನು ಮುಂದೂಡದೆ ನಡೆಸುವುದು ಅತ್ಯಂತ ಅಗತ್ಯ ಎಂದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆನಂದ ಭಟ್ ಬಿ. ಮಾತನಾಡಿ, ಸಾಧನೆಗೆ ವಯಸ್ಸಿನ ಹಂಗಿಲ್ಲ. ಜೀವನದುದ್ದಕ್ಕೂ ನಾವು ಬೇರೆ ಭೇರೆ ನೆಲೆಯಲ್ಲಿ ಸಾಧನೆಗೈಯುತ್ತಾ ಸಾಗಬಹುದು. ಉನ್ನತವಾದ ಗುರಿಯನ್ನು ಹೊಂದಿ ಅದನ್ನು ಸಾಕಾರಗೊಳಿಸುವ ನೆಲೆಯಲ್ಲಿ ಸದಾ ಕಾರ್ಯತತ್ಪರರಾಗಬೇಕು ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸನಾತನ ಧರ್ಮ ಹಾಗೂ ರಾಷ್ಟ್ರ ರಕ್ಷಣೆಗೆ ಯುವಸಮೂಹ ಸನ್ನದ್ಧವಾಗಿರಬೇಕು. ಯಾವುದೇ ಜಾಗ, ದೇಶಕ್ಕೆ ಹೋದರೂ ನಮ್ಮತನದ ಹಿರಿಮೆಯನ್ನು ಅಲ್ಲಿನ ಜನರ ಮುಂದೆ ಸಾರಬೇಕು. ಭಾರತೀಯರೆಂದರೆ ಮೂಗು ಮುರಿಯುವ ಕೆಲವು ಪಾಶ್ಚಿಮಾತ್ಯ ರಾಷ್ಟ್ರದ ಜನಕ್ಕೆ ಉತ್ತರ ನೀಡುವಂತೆ ನಮ್ಮ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅಂಬಿಕಾ ಮಹಾವಿದ್ಯಾಲಯದಲ್ಲಿ ಪದವಿ ಪೂರೈಸಿ ಮಂಗಳೂರು ವಿವಿಯಿಂದ ಬಿ.ಎಯಲ್ಲಿ 2ನೇ ರ್ಯಾಂಕ್‍ಗಳಿಸಿದ ನಯನಾ, ಬಿ.ಎಸ್ಸಿಯಲ್ಲಿ 3ನೇ ರಾಂಕ್ ಗಳಿಸಿದ ವರೇಣ್ಯಾ ಅವರಿಗೆ ಶೈಕ್ಷಣಿಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಿ.ಎ ಪರೀಕ್ಷೆಯ ಗ್ರೂಪ್ 1 ಹಾಗೂ 2ರಲ್ಲಿ ತೇರ್ಗಡೆ ಹೊಂದಿದ ಸ್ವರ್ಣಾ ಶೆಣೈ ಅವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆಗೈದ ಅಂತಿಮ ಬಿ.ಎ ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಅವರಿಗೆ ಸಾಂಸ್ಕೃತಿಕ ರತ್ನ ಪ್ರಶಸ್ತಿ, ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ಅಂತಿಮ ಬಿಎ ವಿದ್ಯಾರ್ಥಿನಿ ಜಯಶ್ರೀ ಹಾಗೂ ಪ್ರಥಮ ಬಿ.ಕಾಂ ವಿದ್ಯಾರ್ಥಿ ಪ್ರಸ್ತುತ್ ಅವರಿಗೆ ಕ್ರೀಡಾರತ್ನ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ., ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ನವನೀತ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.