ಬೆಂಗಳೂರು : ಸಂಸದರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಯು.ಟಿ. ಖಾದರ್ ಕೊಠಡಿಗೆ ಆಗಮಿಸಿದ ಕುಮಾರಸ್ವಾಮಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸುವ ವೇಳೆ ಜಿ.ಟಿ. ದೇವೇಗೌಡ, ಭೋಜೇಗೌಡ ಉಪಸ್ಥಿತರಿದ್ದರು. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಗೆದ್ದಿರುವ ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾಗಿ ನೇಮಕವಾಗಿದ್ದಾರೆ.ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬ ಮುಗಿಸಲು ಪ್ರಯತ್ನಿಸಿದ ಕಾಂಗ್ರೆಸ್ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವನ್ನು ಮುಗಿಸಲು ಕುತಂತ್ರ ನಡೆಸಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 82 ವರ್ಷದ ರಾಜ್ಯದ ರೈತ ನಾಯಕ ಯಡಿಯೂರಪ್ಪ ಅವರ ಮೇಲೆ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ. ಅವರನ್ನು ಜೈಲಿಗೆ ಕಳುಹಿಸಲೇಬೇಕು ಎಂಬಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರ ಮೇಲೆ ಜಾಮೀನು ರಹಿತ ಕೇಸ್ ಹಾಕಲು ಹೊರಟಿದ್ದಾರೆ. ಯಡಿಯೂರಪ್ಪ ಅವರಿಗೆ ನ್ಯಾಯಾಲಯದಿಂದ ರಿಲೀಫ್ ಸಿಕ್ಕಿದೆ. ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಮಂದಿ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನಾಲ್ಕು ತಿಂಗಳ ನಂತರ ಪ್ರಕರಣವನ್ನು ಕೆದಕಿರುವುದರ ಹಿಂದೆ ದುಷ್ಟ ಆಲೋಚನೆ ಇದೆ ಎಂದು ಹೇಳಿದ್ದರು