ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಶೇ.4ರಷ್ಟು ಹೆಚ್ಚಿಸುವ ಮೂಲಕ ತನ್ನ ಜನವಿರೋಧಿ ನೀತಿಯನ್ನು ಮತ್ತೆ ಪ್ರದರ್ಶಿಸಿದೆ. ಅವೈಜ್ಞಾನಿಕ ಗ್ಯಾರಂಟಿ ಯೋಜನೆ ಮತ್ತು ಸಚಿವರುಗಳ ನಡೆಸಿದ ಭ್ರಷ್ಟಾಚಾರದಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದ್ದು ಈಗ ತೆರಿಗೆ ಹೆಚ್ಳಳ ಮಾಡುವ ಮೂಲಕ ಜನತೆಗೆ ಶಾಕ್ ನೀಡಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ವಿದ್ಯುತ್ ದರ, ಮುದ್ರಾಂಕ ಶುಲ್ಕ ಸಹಿತ ಎಲ್ಲ ರೀತಿಯ ಶುಲ್ಕಗಳನ್ನು ಏರಿಸಿ ಜನರಿಗೆ ಅನ್ಯಾಯ ಮಾಡಿದೆ. ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿರುವುದರಿಂದ ಸಾಗಾಟ ವೆಚ್ಚ ಹೆಚ್ಚಳವಾಗಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ರಾಜ್ಯದ ಜನತೆ ಇನ್ನಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ ಎಂದು ಆರೋಪಿಸಿದರು.
ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಜನತೆ ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯಕ್ಕೆ ಉಳಿಗಾಲವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಳಿನ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.