ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಮಾಜಕಾರ್ಯ ವಿಭಾಗಗಳ ಸಹಯೋಗದಲ್ಲಿ ಪಾಪೆಮಜಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ರಚನೆ ಹಾಗೂ ವಿವಿಧ ಬಗೆಯ ವೈಜ್ಞಾನಿಕ ಚಟುವಟಿಕೆಗಳನ್ನು ನಡೆಸಲಾಯಿತು.
ಪಾಪೆಮಜಲು ಪ್ರೌಢಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದನ್ನೂ ವೈಜ್ಞಾನಿಕ ನೆಲೆಯಲ್ಲಿ ಪ್ರಶ್ನಿಸಿ ವಿಶ್ಲೇಷಿಸುವ ಗುಣವನ್ನು ಈ ಕಾರ್ಯಕ್ರಮದ ಮೂಲಕ ಬೆಳೆಸಿ ಕೊಳ್ಳಬೇಕು ಎಂದು ಹೇಳಿದರು.
ಪಾಪೆಮಜಲು ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಅನನ್ಯ ಕೃಷ್ಣ ಸ್ವಾಗತಿಸಿದರು. ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ ಶ್ರೀಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಕ್ಷಿತ್ ವಂದಿಸಿದರು. ಅಜಿತ್ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಸುಜಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಕುತೂಹಲದಿಂದ ನೋಡುವ ಮತ್ತು ವಿಶ್ಲೇಷಿಸುವ ಅನೇಕ ವಿಜ್ಞಾನ ಮಾದರಿಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು. ಅವುಗಳಲ್ಲಿ ಇಸಿಜಿ, ಲೇಸರ್ ಕಿರಣ, ಶಬ್ದ ಗುರುತಿಸುವಿಕೆ ಮುಂತಾದ ಮಾದರಿಗಳು ವಿದ್ಯಾರ್ಥಿಗಳಿಗೆ ನೋಡಲು ಮತ್ತು ವಿಶ್ಲೇಷಿಸಲು ತುಂಬಾ ಉಪಯುಕ್ತವಾಗಿದ್ದವು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ವಿಷಯಗಳ ಬಗ್ಗೆ ರಸಪ್ರಶ್ನೆ ಸಹ ನಡೆಸಲಾಯಿತು ಮತ್ತು ಸೌರವ್ಯೂಹದ ಬಗ್ಗೆ ಮಾಹಿತಿ ನೀಡಲಾಯಿತು. ಮತ್ತೊಂದೆಡೆ ರಾಸಾಯನಿಕಗಳ ಪ್ರತಿಕ್ರಿಯೆಗಳನ್ನು ತೋರಿಸಲು ರಾಸಾಯನಿಕಗಳನ್ನು ಬಳಸಿ ಪ್ರಯೋಗಗಳನ್ನು ನಡೆಸಲಾಯಿತು, ಇದು ವಿದ್ಯಾರ್ಥಿಗಳಿಗೆ ರಾಸಾಯನಿಕಗಳು ಮತ್ತು ಅವುಗಳ ಪ್ರತಿಕ್ರಿಯೆಗಳ ಬಗ್ಗೆ ತಿಳಿಯಲು ಉಪಯುಕ್ತವಾಗಿತ್ತು.