ಸುಬ್ರಹ್ಮಣ್ಯ : ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಮಾರ್ಗಸೂಚಿ ಹಾಗೂ ಪಾರ್ಕಿಂಗ್ ಸಮಸ್ಯೆ ಬಗ್ಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಇಲಾಖೆಗಳು, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಭೆ ನಡೆದು ಬೀದಿ ಬದಿ ಪಾರ್ಕಿಂಗ್ ನಿಷೇಧ, ಕಾಶಿಕಟ್ಟೆ- ಸವಾರಿ ಮಂಟಪ, ಬೈಪಾಸ್ ರಸ್ತೆ ಒನ್ ವೇ ಮಾಡಲು ನಿರ್ಣಯ ಅಂಗೀಕರಿಸಲಾಯಿತು.
ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ ಮಾತನಾಡಿ, ಸಾರ್ವಜನಿಕರು ರಸ್ತೆ ಮಾರ್ಗಸೂಚಿ ನಿಯಮ ಪಾಲಿಸಬೇಕು. ಪಾರ್ಕಿಂಗ್ ನಿರ್ವಹಣೆಯನ್ನು ಸಂಬಂಧಿಸಿದವರು ಸಮರ್ಪಕವಾಗಿ ನಿರ್ವಹಿಸಬೇಕು. ಕುಕ್ಕೆಗೆ ದಿನನಿತ್ಯ ಸಾವಿರಾರು ವಾಹನಗಳು ಬರುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆಗೆ ಸಮರ್ಪಕ ಕ್ರಮಕೈಗೊಳ್ಳುವ ಅಗತ್ಯ ಇದೆ ಎಂದರು.
ಟ್ರಾಫಿಕ್ ನಿರ್ವಹಣೆಗೆ 6 ಸಿಬ್ಬಂದಿ ನೇಮಕ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ದೇವಸ್ಥಾನದ ವತಿಯಿಂದ 6 ಮಂದಿ ಸಿಬ್ಬಂದಿಯನ್ನು ಟ್ರಾಫಿಕ್ ನಿರ್ವಹಣೆಗೆ ನಿಯೋಜನೆ ಜತೆ ಓರ್ವ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ನಿರ್ಧರಿಸಲಾಯಿತು. ನಿಯಮ ಮೀರಿ ಪಾರ್ಕಿಂಗ್ ಮಾಡುವ ವಾಹನಗಳಿಗೆ ಲಾಕ್ ಮಾಡುವ ಬಗ್ಗೆ ನಿರ್ಣಯಿಸಲಾಗಿದೆ.
ಸುಬ್ರಹ್ಮಣ್ಯ ಠಾಣೆಯ ಉಪನಿರೀಕ್ಷಕ ಕಾರ್ತಿಕ್ ಮಾತನಾಡಿ, 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಅವರು ಸುಬ್ರಹ್ಮಣ್ಯದ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಮಾಡಿರುವ ಆದೇಶವನ್ನು ಪ್ರಸ್ತುತ ದಿನಗಳಿಗೆ ಬದಲಾವಣೆ ಮಾಡಿಕೊಂಡು ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸಭೆ ಕರೆಯಲಾಗಿದೆ. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯವನ್ನು ಪುತ್ತೂರು ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಅವರ ಒಪ್ಪಿಗೆ ಪಡೆದು ಅನುಷ್ಠಾನ ಮಾಡಲಾಗುತ್ತದೆ ಎಂದರು.