ಬೆಳ್ತಂಗಡಿ : ಕಳೆದ ಎರಡು ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ವಾಹನ ಸವಾರರಿಗೆ ಪ್ರತ್ಯಕ್ಷವಾಗುತ್ತಿದೆ. ಬುಧವಾರ ರಾತ್ರಿ ಬಸ್ ಸಂಚಾರಕ್ಕೆ ತಡೆಯೊಡ್ಡಿದ್ದ ಕಾಡಾನೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ರಸ್ತೆ ಬದಿ ಮತ್ತೆ ಕಾಣಸಿಕ್ಕಿದೆ.
ಈ ಹಿಂದೆ ರಸ್ತೆಯ ಅಂಚಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ ಸಲಗ ಶುಕ್ರವಾರ ಘಾಟಿಯ ಮೂರನೇ ತಿರುವಿನ ರಸ್ತೆ ಬದಿ ಇರುವ ಅರಣ್ಯ ಇಲಾಖೆಯ ಔಷಧ ಸಸ್ಯಗಳ ಸಂರಕ್ಷಣ ವನದ ಗೇಟಿನ ಮುಂಭಾಗವೇ ವಿಹಾರ ಆರಂಭಿಸಿತ್ತು.
ಆನೆ ಸುಮಾರು ಒಂದು ತಾಸಿಗಿಂತ ಅಧಿಕ ಹೊತ್ತು ಅದೇ ಸ್ಥಳದಲ್ಲಿ ವಿರಮಿಸಿತ್ತು. ಆನೆ ಗೇಟ್ ಮುರಿದು ಬರುವ ಸಾಧ್ಯತೆ ಇದ್ದ ಕಾರಣ ವಾಹನ ಸವಾರರು ಭೀತಿಗೊಳಗಾದರು. ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಆನೆಯನ್ನು ಅರಣ್ಯದತ್ತ ಅಟ್ಟಬೇಕಾಯಿತು. ಬುಧವಾರ ರಾತ್ರಿ ಘಾಟಿಯ ಏಳು ಹಾಗೂ ಎಂಟನೇ ತಿರುವಿನ ಮಧ್ಯೆ ಕಾಡಾನೆ ಸರಕಾರಿ ಬಸ್‌ಗೆ ಅಡ್ಡ ನಿಂತ ಕಾರಣ ಅರ್ಧ ತಾಸಿಗಿಂತ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.