ಅಯೋಧ್ಯೆ: ರಾಮಮಂದಿರ ಸ್ಪೋಟಿಸುವುದಾಗಿ ಜೈಶೆ ಮೊಹಮ್ಮದ್ ಉಗ್ರ ಸಂಘಟನೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.
ರಾಮಮಂದಿರದ ಮೇಲೆ ಬಾಂಬ್ ದಾಳಿ ಮಾಡಲಾಗುವುದು ಎಂದು ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಆಡಿಯೊ ವೈರಲ್ ಆದ ಬೆನ್ನಲ್ಲೇ, ರಾಮಮಂದಿರದ ಸುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಮಮಂದಿರ ಸ್ಫೋಟಿಸುವ ಕುರಿತು ಜೈಶೆ ಮೊಹಮ್ಮದ್ ಉಗ್ರರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಮಮಂದಿರ ಸುತ್ತಮುತ್ತ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿಗಳ ಮೂಲಕ ಶಂಕಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಕೂಡ ಅಯೋಧ್ಯೆಯಲ್ಲಿ ಹೆಚ್ಚು ಅಲರ್ಟ್ ಆಗಿವೆ. ಅಯೋಧ್ಯೆಯ ಇಂಚಿಂಚೂ ಪ್ರದೇಶದ ಮೇಲೆ ಭದ್ರತಾ ಸಿಬ್ಬಂದಿಯು ನಿಗಾ ಇರಿಸಿದ್ದಾರೆ. ವಾಹನಗಳ ತಪಾಸಣೆಯೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು 2024ರ ಜನವರಿ 22ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಇದಾದ ಬಳಿಕ ದೇಶ-ವಿದೇಶಗಳಿಂದ ರಾಮನ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ನಿತ್ಯ ಸರಾಸರಿ ಒಂದು ಲಕ್ಷಕ್ಕೂ ಅಧಿಕ ಮಂದಿ ಅಯೋಧ್ಯೆಗೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ. ರಾಮಮಂದಿರ ನಿರ್ಮಾಣದ ಬಳಿಕ ಅಯೋಧ್ಯೆಯು ದೇಶದ ಪ್ರಮುಖ ಯಾತ್ರಾಸ್ಥಳವಾಗಿ ಬದಲಾಗಿದೆ. ಇದರ ಬೆನ್ನಲ್ಲೇ, ರಾಮಮಂದಿರವನ್ನು ಸ್ಫೋಟಿಸುವ ಕುರಿತು ಉಗ್ರರು ಬೆದರಿಕೆ ಹಾಕಿದ್ದಾರೆ.
ಜಮ್ಮು-ಕಾಶ್ಮೀರದ ಮೂರು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿಯೇ ಉಗ್ರರು ದಾಳಿ ನಡೆಸಿದ್ದಾರೆ. ರಿಯಾಸಿ ಜಿಲ್ಲೆಯ ಮೂಲಕ ವೈಷ್ಣೋದೇವಿ ಯಾತ್ರೆಗೆ ತೆರಳುತ್ತಿದ್ದ ಹಿಂದು ಯಾತ್ರಿಕರ ವಾಹನದ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದೋಡಾ ಹಾಗೂ ಕಥುವಾ ಜಿಲ್ಲೆಯಲ್ಲಿಯೂ ಉಗ್ರರು ದಾಳಿ ನಡೆಸಿದ್ದಾರೆ. ಹಾಗಾಗಿ, ಕಾಶ್ಮೀರದಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ನರೇಂದ್ರ ಮೋದಿ ಅವರೇ ಖುದ್ದಾಗಿ ಸಭೆ ನಡೆಸಿ, ಉಗ್ರರಿಗೆ ತಿರುಗೇಟು ನೀಡಲು ಸೂಚನೆ ನೀಡಿದ್ದಾರೆ.