ಪಶ್ಚಿಮ ಘಟ್ಟದಲ್ಲಿ ಮತ್ತೆ ಹರಳು ಕಲ್ಲು ದಂಧೆ ನಡೆಯುತ್ತಿದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ರವಿ ಕುಶಾಲಪ್ಪನವರು ಅಕ್ರಮ ಹರಳು ಕಲ್ಲು ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ, ಬೆಟ್ಟಗಳಲ್ಲಿ ಆಗಿದಿರುವ ಗುಂಡಿಗಳನ್ನು ವೀಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮುತುವರ್ಜಿ ವಹಿಸುವಂತೆ ಹೇಳಿದ್ದರು. ಆದರೆ ಇದೀಗ ಅಕ್ರಮ ಕೆಂಪು ಹರಳು ಕಲ್ಲುಗಳ ದಂದೆ ವ್ಯಾಪಕವಾಗಿ ನಡೆಯುತ್ತಿದೆ.
ಕುಶಾಲನಗರ ಕಡೆಯಿಂದ ಹುಣಸೂರು ಕಡೆಗೆ ಪಿಕ್ ಆಪ್ ವಾಹನದಲ್ಲಿ ಅಕ್ರಮವಾಗಿ ಹರಳು ಕಲ್ಲು ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯವರು ಸಿನೀಮಿಯ ರೀತಿಯಲ್ಲಿ ಬೆನ್ನುಹತ್ತಿ ಮಾಲು ಸಮೇತ ವಾಹನ ವಶ ಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳ ತಂಡ 2495 ಕೆ.ಜಿ. ಹರಳು ಕಲ್ಲು ವಶ ಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಹರಳು ಕಲ್ಲು ಸಾಗಿಸುತ್ತಿದ್ದ ವಾಹನದ ಚಾಲಕ ಅರಣ್ಯ ತಪಾಸಣಾ ಕೇಂದ್ರದ ಸಿಬ್ಬಂದಿಗಳು ನಿಲ್ಲಿಸುವಂತೆ ಸೂಚನೆ ನೀಡಿದರೂ ವೇಗವಾಗಿ ಚಾಲನೆ ಮಾಡಿಕೊಂಡ ಹೋದಾಗ ಆರ್.ಎಫ್.ಒ. ರತನ್ ಕುಮಾರ್ ಅವರು ಹಿಂಬಾಲಿಸಿ ವಾಹನವನ್ನು ತಡೆದು ಮಾಲು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಬೆಂಗಾವಲಾಗಿ ತೆರಳುತ್ತಿದ್ದ ವಾಹನವನ್ನು ವಶ ಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದರೆ ಈ ಜಾಲದಲ್ಲಿ ಭಾಗಿಯಾದ ಪ್ರಮುಖ ವ್ಯಕ್ತಿಗಳ ಬಂಧನ ಮಾಡುವ ಮೂಲಕ ಈ ಅಕ್ರಮ ಚಟುವಟಿಕೆಯನ್ನು ತೊಡೆಯ ಹಾಕಬಹುದಾಗಿದೆ. ಭೂಮಿಯನ್ನು ನೂರಾರು ಅಡಿಗಳಷ್ಟು ಅಗೆದು ಹರಲು ಕಲ್ಲುಗಳ ಶೋಧ ಕಾರ್ಯ ಮಾಡಲಾಗುತ್ತಿದೆ. ಬ್ರಿಟಿಷರು ಈ ಬೆಟ್ಟವನ್ನು ‘ರೆಡ್ ಸ್ಟೋನ್ ವ್ಯಾಲಿ’ ಅಂತಾ ಕರೆಯುತ್ತಿದ್ದರು. ಆದರೆ ಆಗ ಜನ ಆ ಬಗ್ಗೆ ಹೆಚ್ಚು ಉತ್ಸುಕರಾಗಿರಲಿಲ್ಲ. ಆ ಬಳಿಕ ಕಲ್ಲು ಹಾಕಿಕೊಂಡರೆ ಒಳಿತಾಗುತ್ತದೆ ಎಂಬ ಧಾರ್ಮಿಕ ನಂಬಿಕೆ ಬಂದ ಹಿನ್ನಲೆಯಲ್ಲಿ ಈಗ ಆ ಕಲ್ಲಿಗೆ ಬೇಡಿಕೆ ಹೆಚ್ಚಾಗಿದೆ.