ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು ಇಲ್ಲಿ ‘ಗೋವಿಂದ ಗೋವಿಂದ’ ಎಂಬ ಘೋಷ ಮೊಳಗಬೇಕೇ ಹೊರತು ರಾಜಕೀಯ ಹೇಳಿಕೆಗಳು ಕೇಳಬಾರದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಹೇಳಿದ್ದಾರೆ.
ಗುರುವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದ ಬಳಿಕ ಅವರು ತಿರುಮಲ ಬೆಟ್ಟದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ತಿಳಿಸಿದರು.
ತಿರುಮಲ ಒಂದು ಪವಿತ್ರ ಕ್ಷೇತ್ರ, ದೇವಸ್ಥಾನದ ಪಾವಿತ್ರ್ಯತೆಯನ್ನು ರಕ್ಷಿಸಬೇಕು ಹೀಗಾಗಿ ತಿರುಪತಿಯಲ್ಲಿ ಏಡುಕುಂಡಲವಾಡ ಸ್ವಾಮಿ ಗೋವಿಂದ ಗೋವಿಂದ ಎಂಬ ಘೋಷ ಮಾತ್ರ ಕೇಳಬೇಕೆಂದದು ಹೇಳಿದ ಅವರು, ಬೆಟ್ಟದಲ್ಲಿ ಭಕ್ತರಿಗೆ ಶಾಂತಿಯುತವಾಗಿ ತಂಗಲು ಹಾಗೂ ದರ್ಶನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಪವಿತ್ರ ದೇವಾಲಯದ ಪಾವಿತ್ರ್ಯತೆ ಹಾಳಾಗಿದೆ, ಶಕ್ತಿಶಾಲಿಗಳ ಮನೆ ಬಾಗಿಲಿಗೆ ದೇವರನ್ನು ಕೊಂಡೊಯ್ಯುವುದನ್ನು ಎಂದಾದರೂ ನೀವು ಕೇಳಿದ್ದೀರಾ. ಇಲ್ಲಿ ಡ್ರಗ್ಸ್ ಮದ್ಯ ಮಾಂಸ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು, ಕಳೆದ ಐದು ವರ್ಷಗಳಲ್ಲಿ ಬೆಟ್ಟದಲ್ಲಿ ಆಹಾರದ ಗುಣಮಟ್ಟವೂ ಹದಗೆಟ್ಟಿದೆ ಎಂದರು.
ಅನ್ಯ ಧರ್ಮೀಯರಿಗೆ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪಗಳಿಂದ ವಿವಾದಕ್ಕೆ ಒಳಗಾಗಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಡಿಪಿ) ಅನ್ನು ಸ್ವಚ್ಛಗೊಳಿಸುವುದಾಗಿ ಅವರು ಹೇಳಿದರು.