ಪುತ್ತೂರು: ವಿದ್ಯಾರ್ಥಿಗಳು ತಮ್ಮ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಉಪಯೋಗಿಸಬೇಕು. ನಮ್ಮ ಸಂತೋಷ, ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಸಂಸ್ಥೆಯಿಂದ ಹೊರಹೋದ ಮೇಲೂ ಹಿರಿಯ ವಿದ್ಯಾರ್ಥಿಗಳಾಗಿ ಕಾಲೇಜಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಎಂದು ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಹೇಳಿದರು .
ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ ‘ಆದಿಯೋ ಬ್ಲಾಸಮ್ಸ್’ ಬಿಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವಿಕ ವಿಭಾಗದ ಮುಖ್ಯಸ್ಥ ಡಾ. ನಾಬರ್ಟ್ ಮಸ್ಕರೇನ್ಸಸ್ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತನ್ನು ರೂಢಿಸಿಕೊಳ್ಳಬೇಕು. ಕಲಿಕೆಯೊಂದಿಗೆ ಎಲ್ಲಾ ಕ್ಷೇತ್ರದಲ್ಲೂ ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು ಎಂದರು.
ಉಪ ಪ್ರಾಂಶುಪಾಲ ಡಾ|ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ಬಿಎ ವಿದ್ಯಾರ್ಥಿಗಳು ಎಂದಿಗೂ ತಮ್ಮ ಆಯ್ಕೆಯ ಬಗ್ಗೆ ಕೀಳರಿಮೆ ಹೊಂದಬಾರದು ಮೂದಲಿಸುವವರ ಮುಂದೆ ಸಾಧಿಸಿ ತೋರಿಸಬೇಕು. ಇಂದು ಸಂಸ್ಥೆಯಿಂದ ಸಮಾಜಕ್ಕೆ ಹೋಗುತ್ತಿರುವ ನೀವು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ವಿದ್ಯಾರ್ಥಿನಿ ಎಂ ಪೂಜಾ ಸ್ವಾಗತಿಸಿದರು ವಿದ್ಯಾರ್ಥಿನಿ ಖನೀಸ್ ಫಾತಿಮಾ ವಂದಿಸಿದರು. ವಿದ್ಯಾರ್ಥಿ ಮಹಮ್ಮದ್ ಆಶಿಕ್ ಯು. ಕಾರ್ಯಕ್ರಮ ನಿರೂಪಿಸಿದರು