ಪುತ್ತೂರು: 25 ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಕ್ಕೆ ಬಿಡುವ ಮೂಲಕ ಉರಗ ಪ್ರೇಮಿಯೊಬ್ಬರು ತನ್ನ ಉರಗಪ್ರೇಮವನ್ನು ಮೆರೆದಿದ್ದಾರೆ.
ಯುವ ಉರಗಪ್ರೇಮಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ತೇಜಸ್ ಬನ್ನೂರು ಅವರೇ ಸುಮಾರು 25 ಮರಿಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಸಂಕಷ್ಟದಲ್ಲಿರುವ ಉರಗ ಸಂತಾನವನ್ನು ರಕ್ಷಿಸಿ, ಅವುಗಳನ್ನು ಮತ್ತೆ ಪ್ರಕೃತಿಗೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ. ಈವರೆಗೆ ಸುಮಾರು 100 ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ಕಾಡಿಗೆ ಬಿಟ್ಟು ಹೆಬ್ಬಾವುಗಳ ಸಂತತಿಯನ್ನು ರಕ್ಷಿಸಿದ್ದಾರೆ.
ಹೆಚ್ಚಾಗಿ ಮರದ ಪೊಟರೆಯೊಳಗೆ, ಬಿದ್ದ ತೆಂಗಿನ ಮರದ ಟೊಳ್ಳಾದ ಭಾಗದಲ್ಲಿ ಹೆಬ್ಬಾವುಗಳು ಮೊಟ್ಟೆಗಳನ್ನು ಇಡುತ್ತವೆ. ಸುಮಾರು 60 ದಿನಗಳ ಕಾಲ ಹೆಬ್ಬಾವುಗಳು ಮರಿಗಳಿಗೆ ಕಾವನ್ನು ನೀಡುತ್ತದೆ. ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಮಾತ್ರ ತಮ್ಮ ಮೊಟ್ಟೆಗಳಿಗೆ ಕಾವು ನೀಡುವ ಮೂಲಕ ಮರಿಗಳನ್ನು ಹೊರ ತರುತ್ತದೆ. ಮಾನವ ಅಥವಾ ಇತರ ಪ್ರಾಣಿಗಳ ತೊಂದರೆಯಾದಾಗ ಮಾತ್ರ ಹೆಬ್ಬಾವು ಮತ್ತು ಕಾಳಿಂಗ ಸರ್ಪ ತಮ್ಮ ಮೊಟ್ಟೆಗಳನ್ನು ಬಿಟ್ಟು ಬೇರೆಡೆ ಸಾಗುತ್ತದೆ. ಹೀಗೆ ಸಾಗಿದ ಸಂದರ್ಭದಲ್ಲಿ ಮೊಟ್ಟೆಗಳು ಕಾವಿಲ್ಲದೆ ಹಾಳಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತದೆ.

ಹೀಗೆ ಹಾವುಗಳಿಲ್ಲದೆ ಅನಾಥವಾಗಿರುವ ಇಂತಹ ಮೊಟ್ಟೆಗಳನ್ನು ಶ್ರೇಯಸ್ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತಮ್ಮ ಮನೆಗೆ ಕೊಂಡೊಯ್ದು ಅವುಗಳಿಗೆ ಕೃತಕ ಕಾವನ್ನು ನೀಡುವ ವ್ಯವಸ್ಥೆ ಮಾಡುತ್ತಾರೆ.
ಇದೇ ರೀತಿ ಈ ಬಾರಿ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಸಂಗ್ರಹಿಸಿದ 12 ಮತ್ತು ಕನ್ಯಾನದಲ್ಲಿ ಸಂಗ್ರಹಿಸಿ 13 ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿ ಮಾಡುವ ಮೂಲಕ ಜಿಲ್ಲೆಯ ವಿವಿಧ ಕಾಡುಗಳಿಗೆ ಬಿಟ್ಟಿದ್ದಾರೆ.