ಪುತ್ತೂರು: ಪುತ್ತೂರು ವಕೀಲರ ಸಂಘದ ವತಿಯಿಂದ ಪರಿಸರ ದಿನಾಚರಣೆ ಹಾಗೂ ಉಚಿತ ಸಸಿಗಳ ವಿತರಣಾ ಸಮಾರಂಭ ಬುಧವಾರ ಕೋರ್ಟ್ಆವರಣದಲ್ಲಿ ನಡೆಯಿತು.
ಹಿರಿಯ ನ್ಯಾಯವಾದಿ ಪಿ.ಕೆ.ಸತೀಶನ್ ಅವರಿಗೆ ಪುತ್ತೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಿಯ ಜೋಗ್ಲೆಕರ್ ಗಿಡ ವಿತರಿಸಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಗಿಡ-ಮರಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಕೇವಲ ಗಿಡ ನೆಟ್ಟರೆ ಸಾಲದು. ಗಿಡವನ್ನು ಮಗುವಿನಂತೆ ಲಾಲನೆ, ಪಾಲನೆಯೊಂದಿಗೆ ಫೋಷಿಸುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು. ಈ ಮೂಲಕ ಪರಿಸರ ರಕ್ಷಣೆಯ ಕಾಳಜಿಯೊಂದಿಗೆ ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ. ಈ ನಿಟ್ಟಿನಲ್ಲಿ ಇಂದು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ ರೈಯವರು ತಮ್ಮ ಹುಟ್ಟುಹಬ್ಬ ಆಚರಣೆಯಂದು ವಕೀಲರ ಸಂಘದ ಸದಸ್ಯರಿಗೆ ಗಿಡಗಳನ್ನು ವಿತರಿಸುವ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಹಿರಿಯ ವಕೀಲ ಈಶ್ವರ ಬೆಟ್ಟ ಮಾತನಾಡಿ, ಪ್ರಸ್ತುತ ರಿಯಲ್ ಎಸ್ಟೇಟ್ ಉದ್ಯಮದಿಂದ ಗಿಡಮರಗಳ ನಾಶದ ಜತೆಗೆ ಪರಿಸರ ಸಮತೋಲನದಲ್ಲಿ ವ್ಯತ್ಯ ಉಂಟಾಗಿದೆ. ಪರಿಸರ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು, ಇದೀಗ ವಕೀಲರ ಸಂಘದಿಂದ ಹಮ್ಮಿಕೊಂಡ ಪರಿಸರ ದಿನಾಚರಣೆ ಮಾದರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ನಾನು ವಕೀಲರ ಸಂಘದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದ್ದೆ. ಅದು ನನಗೆ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರೇರಣೆಯಾಯಿತು. ಮುಂದಿನ ದಿನಗಳಲ್ಲಿ ಇಂತಹಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಜತೆಗೆ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸುವ ಮೂಲಕ ಬಾಲ ಕಾರ್ಮಿಕರ ನಿರ್ಮೂಲನೆಯೂ ಆಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಧೀಶೆ ಅರ್ಚನಾ ಕೆ. ಉನ್ನಿತಾನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹೆಚ್.ಆರ್.ಶಿವಣ್ಣ, 2ನೇ ಹೆಚ್ಚುವರಿ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಯೋಗೇಂದ್ರ ಶೆಟ್ಟಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ, ಜತೆ ಕಾರ್ಯದರ್ಶಿ ಮಮತಾ ಸುವರ್ಣ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ, ಕಿರಿಯ ವಕೀಲರು ಉಪಸ್ಥಿತರಿದ್ದರು. ಬಳಿಕ ಎಲ್ಲರಿಗೂ ಗಿಡ ವಿತರಿಸಲಾಯಿತು.
ಸಂಘದ ಕೋಶಾಧಿಕಾರಿ ಮಹೇಶ್ ಕೆ. ಸವಣೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮೋನಪ್ಪ ಎಂ. ವಂದಿಸಿದರು.