ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ತಲವಾರು ಪ್ರದರ್ಶನ ಮಾಡುತ್ತಿದ್ದ ಆರೋಪದ ಹಿನ್ನೆಲೆ ಐವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂ. 9 ರಂದು ಸಂಜೆ, ಬಂಟ್ವಾಳ ಬಡಗಬೆಳ್ಳೂರು ಎಂಬಲ್ಲಿ ಅಪರಿಚಿತ ವ್ಯಕ್ತಿಗಳು, ಸಾರ್ಜಜನಿಕವಾಗಿ ಮಾರಕಾಸ್ತ್ರವನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ಎಮ್.ಆರ್, ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿದಾಗ ಬೋಜರಾಜ, ವಿನೋದ್, ವಿವೇಕ್, ರಕ್ಷೀತ್, ರಕ್ಷಕ್ ಎಂಬವರುಗಳು ಸಾರ್ವಜನಿಕ ಸ್ಥಳದಲ್ಲಿ ತಲವಾರು ಹಿಡಿದುಕೊಂಡು ಸಾರ್ವಜನಿಕವಾಗಿ ಭಯವನ್ನುಂಟು ಮಾಡುತ್ತಿರುವುದು ಕಂಡುಬಂದಿದ್ದು, ಇಲಾಖಾ ವಾಹನ ಸ್ಥಳಕ್ಕೆ ಬರುವುದನ್ನು ಕಂಡು ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ ಆಟೋ ರಿಕ್ಷಾದಲ್ಲಿ ಒಂದು ತಲವಾರು ಪತ್ತೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 69/2024, ಕಲಂ: 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.