ಮೂರು ವರ್ಷಗಳ ಕಾಲ ಪಕ್ಷಕ್ಕೆ ಚ್ಯುತಿ ಬಾರದ ರೀತಿಯಲ್ಲಿ ದುಡಿದ ತೃಪ್ತಿ ನಮಗಿದೆ | ಪಕ್ಷದ ಜವಾಬ್ದಾರಿಯಿಂದ ನಮ್ಮನ್ನು ಮುಕ್ತಗೊಳಿಸಿ : ಪುತ್ತೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್‍ ಅಧ್ಯಕ್ಷರಿಂದ ವರಿಷ್ಠರಿಗೆ ಮನವಿ | ಪತ್ರಿಕಾಗೋಷ್ಠಿಯಲ್ಲಿ ಎಂ.ಬಿ.ವಿಶ್ವನಾಥ ರೈ , ಡಾ.ರಾಜಾರಾಮ ಕೆ.ಬಿ.

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದರೂ ಪಕ್ಷದ ಹೈಕಮಾಂಡ್ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ಕಲ್ಪಿಸಿತ್ತು. ಈ ಸಂದರ್ಭದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ನಾವು ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿ ಚ್ಯುತಿ ಬಾರದಂತೆ ಅಹರ್ನಿಶಿ ದುಡಿದಿದ್ದೇವೆ. ಇದೀಗ ನಮ್ಮ ಪಕ್ಷದ ಜವಾಬ್ದಾರಿ ಅವಧಿ ಮುಗಿದಿದ್ದು, ನಮ್ಮನ್ನು ಪಕ್ಷದ ಹುದ್ದೆಯಿಂದ ಬಿಡುಗಡೆ ಮಾಡವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ ಎಂದು ಪುತ್ತೂರು ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಕ್ಷ ನಮಗೆ ಮೂರು ವರ್ಷ ಅವಧಿ ನೀಡಿದೆ. ನಮ್ಮ ಅವಧಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಕಾರ್ಯಕರ್ತರನ್ನು ಸಂಘಟಿಸಿದ್ದೇವೆ. ವರಿಷ್ಠರ ಆದೇಶದಂತೆ ಕಾಲ ಕಾಲಕ್ಕೆ ನಿರ್ವಹಿಸಬೇಕಾದ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಈ ನಿಟ್ಟಿನಲ್ಲಿ ಗೊಂದಲ ಇರಬಾರದು ಎಂದು ಪತ್ರಿಕಾಗೋಷ್ಠಿ ಕರೆದಿದ್ದೇವೆ ಎಂದು ತಿಳಿಸಿದ ಅವರು, ಯುವಕರಿಗೆ ಅವಕಾಶ ನೀಡಿ ಮುಂದೆ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬೆಳೆಯಲಿ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ತೊಡಗಿಸಿಕೊಂಡು ಮತಯಾಚನೆ ಮಾಡಿದ್ದೇವೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕೂಡಾ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ. ಇತರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಮ್ಮನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.































 
 

ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ. ಮಾತನಾಡಿ, ಸ್ವಾಭಿಮಾನಿ ಬದುಕು ಕೊಟ್ಟ ಪಕ್ಷ ಕಾಂಗ್ರೆಸ್‍. ಪಕ್ಷದಲ್ಲಿ ಹಲವಾರು ಯುವ, ಕ್ರಿಯಾಶೀಲರು ಇದ್ದಾರೆ. ಅವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನಮ್ಮನ್ನು ಹುದ್ದೆಯಿಂದ ಮುಕ್ತ ಗೊಳಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top