ಪುತ್ತೂರು: ವೀರಮಂಗಲ, ಕಾಯರ್ ಮುಗೇರು ಹಾಗೂ ಪಲ್ಲತ್ತೋಡಿ, ಖಂಡಿಗೆ ಪರಿಸರದಲ್ಲಿ ಇಂದು ಆನೆ ಪ್ರತ್ಯಕ್ಷವಾಗಿದ್ದು, ಕೃಷಿ ತೋಟಗಳಿಗೆ ಹಾನಿ ಮಾಡಿದೆ.

ಬಾಳೆಗಿಡ, ಅಡಕೆ ಮರಗಳಿಗೆ ಆನೆ ಹಾನಿ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ.

ಸವಣೂರು ಪರಿಸರದಿಂದ ನೇರವಾಗಿ ಗೌರಿ ಹೊಳೆ ದಾಟಿ ಬಂದಿರುವ ಆನೆ ಅರ್ತಿಕೆರೆ, ಕಾಯರ್ ಮುಗೇರು, ವೀರಮಂಂಗಲ ಮುಂತಾದ ಕಡೆಗಳಲ್ಲಿ ತಿರುಗಾಡುತ್ತಿದೆ. ಪರಿಣಾಮ ಜನರು ಆತಂಕಿತರಾಗಿದ್ದಾರೆ. ಆನೆಯ ಹೆಜ್ಜೆ ಗುರುತು ಕಂಡು ಹಿಡಿದು ಆನೆಯನ್ನು ಕಾಡಿಗಟ್ಟುವ ಪರಿಣತರು ಇನ್ನೇನು ನಮ್ಮೊಂದಿಗೆ ಸೇರಲಿದ್ದಾರೆ. ರಾತ್ರಿ ಹೊತ್ತು ಆನೆಯನ್ನು ಕಾಡಿಗಟ್ಟುವ ಕಲಸ ಮಾಡಲಿದ್ದೇವೆ ಎಂದು ಸಹಾಯಕ ಅರಣ್ಯಾಧಿಕಾರಿ ಕುಮಾರ ಸ್ವಾಮಿ ನ್ಯೂಸ್ ಪುತ್ತೂರಿಗೆ ತಿಳಿಸಿದ್ದಾರೆ.

ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಓಡಾಡುವಾಗ ಎಚ್ಚರಿಕೆ ವಹಿಸಬೇಕು. ಹಗಲು ಕಾಡಿಗಟ್ಟುವ ಕಾರ್ಯ ಅಪಾಯಕಾರಿ. ಆದ್ದರಿಂದ ರಾತ್ರಿ ಈ ಕಾರ್ಯ ಮಾಡಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.