ದೆಹಲಿ: ಇಂದು ದೆಹಲಿಯಲ್ಲಿ ಎನ್ ಡಿಎ ಸಂಸದರ ಸಭೆ ಸೇರಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಮೋದಿಯವರನ್ನು ತಮ್ಮ ನಾಯಕನನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಿದ್ದು, ನಾಳೆ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಆದರೆ, ಅಂತಿಮ ದಿನಾಂಕವನ್ನು ಇನ್ನೂ ಬಹಿರಂಗಪಡಿಸಿಲ್ಲ. ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ನೂತನ ಪ್ರಧಾನಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಯಾರಿಗಳು ಶುರುವಾಗಿವೆ.
ಎನ್ ಡಿಎ ಸಂಸದರ ನಾಯಕರಾಗಿ ಮೋದಿ ಆಯ್ಕೆಯಾದ ನಂತರ, ಮೈತ್ರಿಕೂಟದ ಹಿರಿಯ ಸದಸ್ಯರಾದ ಟಿಡಿಪಿಯ ಎನ್ ಚಂದ್ರಬಾಬು ನಾಯ್ಡು ಮತ್ತು ಜೆಡಿಯುನ ನಿತೀಶ್ ಕುಮಾರ್ ಅವರು ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಯಾವೆಲ್ಲ ಸಂಸದರು ಬೆಂಬಲ ನೀಡುತ್ತಾರೆಂಬ ಪಟ್ಟಿಯನ್ನು ಅವರಿಗೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ
ಬಿಜೆಪಿಗೆ ಬಹುಮತದ ಕೊರತೆ ಎದುರಾದರೂ, ಅದು ತನ್ನ ಮಿತ್ರಪಕ್ಷಗಳ ಬೆಂಬಲದ ಆಧಾರದ ಮೇಲೆ ಸರ್ಕಾರ ರಚಿಸಬಹುದು. ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ಗೆದ್ದಿರುವ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಇತರ ಮೈತ್ರಿ ಪಾಲುದಾರರ ಬೆಂಬಲದೊಂದಿಗೆ ಎನ್ ಡಿಎ ಬಹುಮತವನ್ನು ಪಡೆದಿದೆ.