ಪ್ರಸ್ತುತ ರಾಜಕಾರಣದಲ್ಲಿ ಕಿಂಗ್ ಮೇಕರ್, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಮ್ಮ ಬೆಂಬಲವನ್ನು ಪುನರುಚ್ಛರಿಸಿದ್ದಾರೆ ಹಾಗೂ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಹೇಳಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಚಂದ್ರಬಾಬು ನಾಯ್ಡು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೊಸ ಸರ್ಕಾರದಲ್ಲಿ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬೇಡಿಕೆ ಇರಿಸಿದ್ದಾರೆ. ಲೋಕಸಭೆಯಲ್ಲಿ ಟಿಡಿಪಿ ಪಕ್ಷದ ಸಂಸದರನ್ನ ಸ್ಪೀಕರ್ ಮಾಡಬೇಕು. ಸಂಪುಟದಲ್ಲಿ ಟಿಡಿಪಿಗೆ ಒಂದು ಅಥವಾ ಎರಡು ಸ್ಥಾನ ನೀಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಕೇಂದ್ರದಲ್ಲಿ ಅಟಲ್ ಸರ್ಕಾರ ಇದ್ದಾಗ ಟಿಡಿಪಿ ಸಂಸದರಾಗಿದ್ದ ಜಿ ಎಂ ಬಾಲಯೋಗಿ ಸ್ಪೀಕರ್ ಆಗಿದ್ದರು ಎಂದು ಚಂದ್ರ ಬಾಬು ನಾಯ್ಡು ಹೇಳಿಕೆ ನೀಡಿದ್ದಾರೆ.
ನನ್ನ ಜೀವನದಲ್ಲಿ, ಕಳೆದ ಐದು ವರ್ಷಗಳಲ್ಲಿ ಇಂತಹ ಸರ್ಕಾರವನ್ನು ನಾನು ಎಂದು ನೋಡಿಲ್ಲ. ಎಲ್ಲಾ ವ್ಯವಸ್ಥೆಗಳು ನಾಶವಾದವು, ಜನರೇ ಗೆಲ್ಲಬೇಕು, ರಾಜ್ಯ ನಿಲ್ಲಬೇಕು ಎಂಬ ಘೋಷಣೆಯೊಂದಿಗೆ ನಾವು ಸಾಗಿದೆವು. ರಾಜಕೀಯದಲ್ಲಿ ಏಳುಬೀಳುಗಳಿವೆ, ಯಾವುದೂ ಶಾಶ್ವತವಲ್ಲ. ಜನರು ತಮಗೆ ಇಷ್ಟ ಬಂದಂತೆ ನಡೆದುಕೊಂಡರೆ ರಾಜಕೀಯ ಪಕ್ಷಗಳು ಕಣ್ಮರೆಯಾಗುತ್ತವೆ. ಎಲ್ಲೋ ದೂರದಲ್ಲಿರುವವರು, ಕೂಲಿ ಕೆಲಸ ಮಾಡುವವರು ಕಷ್ಟಪಟ್ಟು ಬಂದು ಮತ ಹಾಕಿದರು. ಟಿಡಿಪಿ ಇತಿಹಾಸದಲ್ಲಿ, ಆಂಧ್ರಪ್ರದೇಶ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಚುನಾವಣೆಗಳಿವು ಎಂದು ನಾಯ್ಡು ಹೇಳಿದ್ದಾರೆ.