ಚೆನ್ನೈ ಏರ್ ಪೋರ್ಟ್ ನಲ್ಲಿ ಜೀವಂತ ಗುಂಡುಗಳ ಸಮೇತ ಸಿಕ್ಕಿಬಿದ್ದ ನಟ ಕರುಣಾಸ್

ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿರುವುದರಿಂದ  ವಿಮಾನ ನಿಲ್ದಾಣದಲ್ಲಿ ಎಲ್ಲರನ್ನೂ ಕೂಲಂಕುಷವಾಗಿ ತಪಾಸಣೆ ಮಾಡಲಾಗುತ್ತದೆ. ಜನಸಾಮಾನ್ಯರಷ್ಟೇ ಸೆಲೆಬ್ರಿಟಿಗಳಿಗೂ ಇದು ತಪ್ಪಿದ್ದಲ್ಲ. ಕೆಲವೊಮ್ಮೆ ನಕಲಿ ಪ್ರಕರಣಗಳೆಂದು ನಿರ್ಲಕ್ಷಿಸಲಾಗುತ್ತದೆ. ಇತ್ತೀಚೆಗಷ್ಟೇ ವಿಮಾನ ನಿಲ್ದಾಣದಲ್ಲಿ ಜನಪ್ರಿಯ ನಟರೊಬ್ಬರ ಬ್ಯಾಗ್​ನಲ್ಲಿ 40 ಜೀವಂತ ಬುಲೆಟ್​ಗಳು ಪತ್ತೆಯಾಗಿದ್ದು, ಭಾರೀ ಗೊಂದಲಕ್ಕೆ ಕಾರಣವಾಗಿದೆ.

ಕರುಣಾಸ್ ತಮ್ಮ ಹಾಸ್ಯದ ಮೂಲಕ ತಮಿಳು ಇಂಡಸ್ಟ್ರಿಯಲ್ಲಿ ಉತ್ತಮ ಖ್ಯಾತಿಯನ್ನು ಗಳಿಸಿದ್ದಾರೆ. ಆ ನಂತರ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಗೆದ್ದರು. ನಂತರ ಸ್ಪರ್ಧಿಸಿ ಸೋತರು. ಇಂದು ಬೆಳಗ್ಗೆ ತಿರುಚ್ಚಿಗೆ ತೆರಳಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಶಾಸಕ ಕರುಣಾಸ್ ಅವರನ್ನು ಭದ್ರತಾ ಪಡೆಗಳು ತಪಾಸಣೆ ನಡೆಸಿದಾಗ ಅವರ ಬ್ಯಾಗ್​ನಲ್ಲಿ 40 ಬುಲೆಟ್​ಗಳು ಪತ್ತೆಯಾಗಿವೆ. ಈ ಕಾರಣಕ್ಕಾಗಿ ಕರುಣಾಸ್​ ಅವರ ಪ್ರಯಾಣವನ್ನು ಸಹ ರದ್ದುಗೊಳಿಸಲಾಯಿತು ಮತ್ತು ವಿಚಾರಣೆಗಾಗಿ ವಶಕ್ಕೆ ಪಡೆಯಲಾಯಿತು.

ಸದ್ಯ ಭದ್ರತಾ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಇದೇ ವೇಳೆ ಕರುಣಾಸ್ ಅವರು ತಮ್ಮ ಬ್ಯಾಗ್​ನಲ್ಲಿ ಗುಂಡುಗಳನ್ನು ಮಿಸ್ಟೆಕ್​ ಆಗಿ ತಂದಿರುವುದು ತನಿಖೆಯ ವೇಳೆ ಗೊತ್ತಾಗಿದೆ. ತಮ್ಮ ರಕ್ಷಣೆಗಾಗಿ ಲೈಸೆನ್ಸ್ ಸಹಿತ ಮಾರಕಾಸ್ತ್ರ ಹೊಂದಿರುವುದಾಗಿ ವಿಚಾರಣೆ ವೇಳೆ ಕರುಣಾಸ್ ಅವರು ತಿಳಿಸಿದ್ದಾರೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಿಯಮಾನುಸಾರ ಬಂದೂಕನ್ನು ದಿಂಡುಗಲ್ ಜಿಲ್ಲೆಯ ತಮ್ಮ ಊರಿನ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆದರೆ, 40 ಜೀವಂತ ಗುಂಡುಗಳು ಆಕಸ್ಮಿಕವಾಗಿ ಕೈಚೀಲದಲ್ಲಿ ಉಳಿದಿವೆ ಎಂದು ಅವರು ಹೇಳಿದರು.































 
 

ತಮ್ಮ ಹೇಳಿಕೆಗೆ ಸಾಕ್ಷಿಯಾಗಿ ಕರುಣಾಸ್ ಅವರು ಈಗಾಗಲೇ ತಮ್ಮ ಬಂದೂಕನ್ನು ಪೊಲೀಸ್ ಠಾಣೆಯಲ್ಲಿ ಒಪ್ಪಿಸಿದ್ದಾರೆ ಎಂದು ಹೇಳುವ ಸಂಬಂಧಿತ ದಾಖಲೆಗಳನ್ನು ಸಹ ತೋರಿಸಿದರು. ಈ ಬಗ್ಗೆ ಭದ್ರತಾ ಅಧಿಕಾರಿಗಳು ವಿಚಾರಿಸಿದಾಗ ಎಲ್ಲಾ ದಾಖಲೆಗಳು ಮಾನ್ಯವಾಗಿವೆ ಎಂದು ತಿಳಿದುಬಂದಿದ್ದು, ನಿಯಮಗಳಿಗೆ ವಿರುದ್ಧವಾದ ಕಾರಣ ಗುಂಡುಗಳನ್ನು ಸಾಗಿಸದಂತೆ ಕರುಣಾಸ್​ ಅವರಿಗೆ ಸೂಚಿಸಿ ಹಿಂತಿರುಗಿದರು.

ಕರುಣಾಸ್ ಅವರು ಕಾಲಿವುಡ್‌ನಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯನಟನಾಗಿ ಒಳ್ಳೆಯ ಮನ್ನಣೆ ಗಳಿಸಿದರು. ಅವರ ವೃತ್ತಿಜೀವನದ ಆರಂಭದಲ್ಲಿ, ಅವರು ನೃತ್ಯ ಸಂಯೋಜಕರಾಗಿ ಪ್ರವೇಶಿಸಿದರು. ಅವರು ಅನೇಕ ಸ್ಟಾರ್ ಹಾಸ್ಯನಟರೊಂದಿಗೆ ನಟಿಸಿದ್ದಾರೆ. ನಂತರ ಅವರು ರಾಜಕೀಯ ಪ್ರವೇಶಿಸಿದರು. 2016 ರಿಂದ 2021 ರವರೆಗೆ ತಮಿಳುನಾಡು ವಿಧಾನಸಭೆಯನ್ನು ಪ್ರತಿನಿಧಿಸಿದರು. 2021 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. ಸದ್ಯ ಕರುಣಾಸ್ ತಮಿಳುನಾಡು ಸಿನಿ ಕಲಾವಿದರ ಸಂಘದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top