ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ವಿವಿಧ ಪುಸ್ತಕ ದತ್ತಿ ಪ್ರಶಸ್ತಿಯ ಕೊನೆಯ ದಿನಾಂಕವನ್ನು ಜೂನ್ 15ಕ್ಕೆ ವಿಸ್ತರಣೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು 2023ನೆಯ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದ್ದು, 2023ರ ಜನವರಿ 1 ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳುಹಿಸಿಕೊಡಬಹುದಾಗಿದೆ ಎಂದು ಈ ಹಿಂದಿನ ಪತ್ರಿಕಾ ಪ್ರಕಟಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿ ಮೇ 31 ಕೊನೆ ದಿನವೆಂದು ತಿಳಿಸಿದ್ದರು. ನಾಡಿನೆಲ್ಲೆಡೆಯಿಂದ ಸಾಹಿತ್ಯಾಸಕ್ತರು, ಬರಹಗಾರರು ಕೊನೆಯ ದಿನವನ್ನು ವಿಸ್ತರಿಸುವಂತೆ ಕೋರಿಕೊಂಡಿದ್ದರ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವೇ ಎಲ್ಲರನ್ನೂ ಒಳಗೊಳ್ಳುವುದು ಎನ್ನುವ ಅಂಶವನ್ನು ಗಮನದಲ್ಲಿರಿಸಿ ಎಲ್ಲರಿಗೂ ಪುಸ್ತಕಗಳನ್ನು ಕಳುಹಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೊನೆಯ ದಿನವನ್ನು ಜೂನ್ 15ರವರೆಗೆ ವಿಸ್ತರಿಸಲಾಗಿದೆ. ಸಾಹಿತ್ಯಾಸಕ್ತರು ಇದರ ಸದುಪಯೋಗ ಪಡೆದು ಕೊಳ್ಳ ಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
2023ನೆಯ ಸಾಲಿನಲ್ಲಿ ಪ್ರಕಟಗೊಂಡಿರುವ ಒಟ್ಟು 53 ವಿವಿಧ ಪುಸ್ತಕಗಳಿಗೆ ದತ್ತಿ ಪುರಸ್ಕಾರಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದೆ. ಅದಕ್ಕಾಗಿ ಅನೇಕ ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸಿದ್ದು ಒಟ್ಟಾರೆ 57 ವಿವಿಧ ಪ್ರಕಾರಗಳ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಪ್ರತಿ ದತ್ತಿ ಪ್ರಶಸ್ತಿಯ ಪ್ರವೇಶಕ್ಕೆ ತಲಾ ಮೂರು ಪುಸ್ತಕಗಳನ್ನು, ಯಾವ ದತ್ತಿಗಾಗಿ ಎನ್ನುವುದನ್ನು ಪುಸ್ತಕದ ಮೊದಲ ಪುಟದಲ್ಲಿ ಸ್ಪಷ್ಟವಾಗಿ ಬರೆದು ‘ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560 018 ಅವರಿಗೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಿದೆ. ಉಳಿದ ನಿಯಮಗಳೆಲ್ಲವೂ ಈ ಹಿಂದೆ ತಿಳಿಸಿದಂತೆಯೇ ಇರುತ್ತವೆ.
ಪ್ರತಿ ಪುಸ್ತಕ ದತ್ತಿ ಪ್ರಶಸ್ತಿಗಳಿಗೂ ತಲಾ ಮೂರು ಪ್ರತಿಗಳನ್ನು ಕಳುಹಿಸಬೇಕು., ಪುಸ್ತಕ ದತ್ತಿ ಪ್ರಶಸ್ತಿಗೆ ಪುಸ್ತಕಗಳನ್ನು ಕಳುಹಿಸುವವರು ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಹೊಂದಿರಬೇಕು. ಪುಸ್ತಕ ಕಳುಹಿಸುವಾಗ ತಮ್ಮ ಸದಸ್ಯತ್ವ ಸಂಖ್ಯೆಯನ್ನು ನಮೂದಿಸಿ ಕಳುಹಿಸಬೇಕು. ಒಂದು ವೇಳೆ ಇನ್ನೂ ಸದಸ್ಯರಾಗಿರದಿದ್ದಲ್ಲಿ ಪರಿಷತ್ತಿನ ಆಜೀವ ಸದಸ್ಯತ್ವವನ್ನು ಪಡೆದುಕೊಂಡು ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ದತ್ತಿಯ ವಿವರಗಳಿಗಾಗಿ ಐದು ರೂಪಾಯಿಯ ಅಂಚೆಚೀಟಿಯನ್ನು ಲಗತ್ತಿಸಿದ ಕವರ್ ಅನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಿ ವಿವರಗಳನ್ನು ಪಡೆಯ ಬಹುದು ಎಂದು ಪ್ರಕಟಣೆ ತಿಳಿಸಿದೆ.