ಪುತ್ತೂರು: ಭವಿಷ್ಯ ಸುಭದ್ರವಾಗಿರಬೇಕಾದರೆ ವಿದ್ಯಾರ್ಥಿ ಜೀವನದಲ್ಲೇ ಕೌಶಲ್ಯಗಳನ್ನು ಉತ್ತಮಗೊಳಿಸುವುದಕ್ಕೆ ಪ್ರಯತ್ನಿಸಬೇಕು. ಸೃಜನಶೀಲತೆ ಮತ್ತು ಸಕ್ರಿಯತೆಗಳ ಮೂಲಕ ಮಾತ್ರವೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಲಭಿಸುವ ವಿಪುಲ ಅವಕಾಶಗಳನ್ನು ಬಳಸಿಕೊಂಡರೆ ಮಾತ್ರ ಸಮಾಜದಲ್ಲಿ ಇತರರು ಗುರುತಿಸುವ ರೀತಿಯಲ್ಲಿ ಬೆಳೆಯಬಹುದು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಗಣಪತಿ ಭಟ್ ಅಭಿಪ್ರಾಯಪಟ್ಟರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವೇಕ ಶೋಧನ -2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜಿನ ಪರೀಕ್ಷಾಂಗ ಕುಲಸಚಿವ, ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಶ್ರೀಧರ ಹೆಚ್ ಜಿ ಮಾತನಾಡಿ, ಪ್ರತಿಯೊಬ್ಬನೂ ತನ್ನೊಳಗಿನ ಶಕ್ತಿಯನ್ನು ಶೋಧಿಸಬೇಕು. ಯಾವಾಗ ನಮ್ಮೊಳಗಿನ ಶಕ್ತಿ ಮತ್ತು ನಿಜವಾದ ಸಂಸ್ಕೃತಿಯನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತೇವೆಯೋ ಆಗ ನಮಗೆ ಜೀವನದಲ್ಲಿ ಆತ್ಮಾನಂದ ಸಿಗುವುದು ಎಂದರು.
ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಡೀನ್ ಹಾಗು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯಸರಸ್ವತಿ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ವಿಶೇಷ ಅಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ವಿವೇಕ ಶೋಧನ -2024 ಕಾರ್ಯಕ್ರಮ ಸಂಯೋಜಕ, ಉಪನ್ಯಾಸಕ ರಾಘವೇಂದ್ರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಾಕೇಶ್ ಪ್ರಸಾದ್ ಕೆ ಸ್ವಾಗತಿಸಿ, ನಿರಂಜನ್ ಪಿ ವಂದಿಸಿದರು. ಪುಣ್ಯಶ್ರೀ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಪದವಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.