ಬೆಳ್ಳಾರೆ : ಜಮೀನು ತಕರಾರು ಪ್ರಕರಣ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಸವಣೂರ ಗ್ರಾಮ ಕಡಬ ಇಡ್ಯಾಡಿ ನಿವಾಸಿ ಗುಣಪಾಲರಿಗೆ ಮತ್ತು ಪ್ರಸಾದ್ ಇಡ್ಯಾಡಿ ಎಂಬವರಿಗೆ ಜಮೀನಿನ ವಿಚಾರದಲ್ಲಿ ನಾಲ್ಕು ವರ್ಷಗಳಿಂದ ತಕರಾರು ಇತ್ತು. ರಾತ್ರಿ ಗುಣಪಾಲರು ಸವಣೂರಿನಿಂದ ತನ್ನ ಮನೆಯ ಕಡೆಗೆ ಸ್ಕೂಟರಿನಲ್ಲಿ ತೆರಳಿ ಮನೆ ಸಮೀಪಿಸುತ್ತಿದ್ದಂತೆ ಮುಂದಿನಿಂದ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ, ಆರೋಪಿ ಪ್ರಸಾದ್ ಇಡ್ಯಾಡಿ ಆಟೋರಿಕ್ಷಾವನ್ನು ಗುಣಪಾಲರ ಸ್ಕೂಟರಿಗೆ ಅಡ್ಡ ಇಟ್ಟು ಅವ್ಯಾಚವಾಗಿ ಬೈದು, ಕೊಲ್ಲುವುದಾಗಿ ಬೆದರಿಸಿ ಆಟೋರಿಕ್ಷಾದಲ್ಲಿದ್ದ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ.
ಈ ವೇಳೆ ಗಾಯಗೊಂಡು ನೆಲಕ್ಕೆ ಬಿದ್ದ ಗುಣಪಾಲರು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿಗೆ ಗುಣಪಾರ ಮಕ್ಕಳಾದ ಮೋಕ್ಷಿತ್, ಭವಿತ್, ರಂಜಿತ್ ಮತ್ತು ನೆರೆಮನೆಯ ಮನೋಹರ ರವರು ಸ್ಥಳಕ್ಕೆ ಬಂದಿದ್ದಾರೆ. ಆರೋಪಿಯು ತನ್ನ ಕೈಯಲ್ಲಿದ್ದ ಬಾಲ್ ಕತ್ತಿಯೊಂದಿಗೆ ಆಟೋರಿಕ್ಷಾದಲ್ಲಿ ಆತನ ಮನೆಯ ಕಡೆಗೆ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಆರೋಪಿ ಪ್ರಸಾದ್ ಇಡ್ಯಾಡಿ, ಬಾಬು ಗೌಡ ಮತ್ತು ಬಾಲಕೃಷ್ಣ ಎಂಬವರು ಸದ್ರಿ ಸ್ಥಳಕ್ಕೆ ವಾಪಾಸು ಬಂದಿದ್ದು, ಬಾಲಕೃಷ್ಣ ಎಂಬವರು ಗುಣಪಾಲರ ಮಗ ಭವಿತ್ ನಿಗೆ ಜೀವಬೆದರಿಕೆ ಒಡ್ಡಿ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯನ್ನು ತಡೆಯಲು ಹೋದ ರಂಜಿತ್ ಮತ್ತು ಮನೋಹರ ನಿಗೂ ಬಾಲ್ ಕತ್ತಿಯು ತಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತಂಡಗಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಸಾದ್ ರವರು ನೀಡಿದ ಪ್ರತಿ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ.