ಪುತ್ತೂರು: ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಜಮೀನುಗಳು ಸಹಿತ ರೈತರ ಬೆಳೆ ವಿಮೆ ಕಾಲಕಾಲಕ್ಕೆ ರೈತರ ಖಾತೆಗೆ ಜಮೆ ಆಗಲು ಹಾಗೂ ಅನಧಿಕೃತ ಜಮೀನುಗಳ ಸರ್ವೆ ಮಾಡಿ ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್ ಗೆ ಕಳುಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ನೂತನವಾಗಿ ಮೂರು ಆ್ಯಪ್ ಗಳನ್ನು ರಾಜ್ಯ ಸರಕಾರ ಹೊರ ತಂದಿದೆ.
ಆಧಾರ್ ಸೀಡ್, ಲ್ಯಾಂಡ್ ಬೀಟ್ ಹಾಗೂ ಬಗೈರ್ ಹುಕುಂ ಆ್ಯಪ್ ಈ ಮೂರು ಆ್ಯಪ್ ಗಳು ಈಗಾಗಲೇ ಸಿದ್ಧಗೊಂಡಿದೆ.
ಇಲ್ಲಿ ಮುಖ್ಯವಾಗಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತೆಂದರೆ ‘ಬಗರ್ ಹುಕುಂ’ ಆ್ಯಪ್ ಮೂಲಕ ಕೃಷಿಕರ, ರೈತರ, ಇನ್ನಿತರರ ಕುಮ್ಕಿ ಜಮೀನು ಸಹಿತ ವರ್ಗ ಜಮೀನನ್ನು ಸರ್ವೆಗೆ ಒಳಪಡಿಸಿ ಮುಂದಿನ ದಿನಗಳಲ್ಲಿ ಕುಮ್ಕಿ ಜಮೀನುಗಳನ್ನು ಸರಕಾರ ಸ್ವಾಧೀನಕ್ಕೆ ಪಡೆದಕೊಳ್ಳುವ ಒಂದು ಪ್ರಕ್ರಿಯೆ ಎಂಬುದು ಆತಂಕಕಾರಿ ವಿಷಯವಾಗಿದೆ.
ಆದರೆ ಈ ಆ್ಯಪ್ ಗಳಲ್ಲಿ ಸದ್ದಿಲ್ಲದೆ ಸಿದ್ಧಪಡಿಸುತ್ತಿರುವುದು ಯಾಕೆ, ಈ ಆ್ಯಪ್ ಗಳ ಉದ್ದೇಶ ಏನು ? ರಾಜ್ಯ ಸರಕಾರ ಏನು ಮಾಡುತ್ತಿದೆ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ತಾನು ನೀಡಿದ ವಾಗ್ದಾನದಂತೆ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ಸಾಕಾರಗೊಳಿಸಿದೆ. ಆದರೆ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಖಜಾನೆ ಖಾಲಿಯಾಗುತ್ತಿದೆ. ಪರಿಣಾಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಗ್ಯಾರಂಟಿ ಯೋಜನೆಯಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸರಕಾರ ಏನೋ ಒಂದು ಸರ್ಕಸ್ ನಡೆಸುತ್ತಿದೆ ಎಂಬುದು ಎಲ್ಲರಿಗೂ ಅನುಮಾನ ಶುರುವಾಗಿದೆ. ಈ ಬೆನ್ನಲ್ಲೇ ಇದೀಗ ಸರಕಾರ ಸರಕಾರಿ, ಕುಮ್ಕಿ ಜಮೀನುಗಳನ್ನು ಸರಕಾರದ ವಶಕ್ಕೆ ಪಡೆಯುವಲ್ಲಿ ‘ಬಗೈರ್ ಹುಕುಂ’ ಆ್ಯಪ್ ಒಂದನ್ನು ಸಿದ್ಧಪಡಿಸಿದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಬಗೈರ್ ಹುಕುಂ ಆ್ಯಪ್ ನಲ್ಲಿ ಅನಧಿಕೃತ ಜಮೀನುಗಳ ವಿವರ ಅಪ್ಲೋಡ್ ಆಗಲಿದ್ದು, ಮುಂದೆ ಅನಧಿಕೃತ ಜಮೀನುಗಳು ಎಷ್ಟಿವೆ ಎಂಬುದು ಸರಕಾರ ತಿಳಿದು ಬರಲಿದೆ. ಮುಂದಿನದ್ದು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ ಎಂಬುದು ಸಾರ್ವಜನಿಕರ ಅನುಮಾನ.
ಆಧಾರ್ ಸೀಡ್ ಆ್ಯಪ್ ಗಳಲ್ಲಿ ಕೃಷಿಕರು, ರೈತರ ಖಾಸಗಿ ದಾಖಲೆಗಳನ್ನು ಆಧಾರ್ ಗೆ ಲಿಂಕ್ ಮಾಡಿ ರೈತರು, ಕೃಷಿಕರಿಗೆ ಕಾಲಕಾಲಕ್ಕೆ ಸರಕಾರದಿಂದ ಸಿಗುವ ಬೆಲೆ ವಿಮೆ, ಇನ್ನಿತರ ಸರಕಾರಿ ಸಹಾಯಧನಗಳು ನೇರವಾಗಿ ಜಮೆ ಮಾಡಲು ಆಧಾರ್ ಸೀಡ್ ಪ್ರಯೋಜನವಾಗಲಿದೆ ಎಂಬುದು ಮತ್ತೊಂದು ಉದ್ದೇಶವಾದರೆ ‘ಲ್ಯಾಂಡ್ ಬೀಟ್’ ಆ್ಯಪ್ ಗಳಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಮೀನುಗಳಾದ ಗೋಮಾಳ, ಹುಲ್ಲುಬನ್ನು ಖರಾಬು, ಸರಕಾರಿ ಫಡಾ, ಸರಕಾರಿ ಖರಾಬು, ಸರಕಾರಿ ಬೀಳು, ದನಗಳಿಗೆ ಮುಫತ್ತು, ಸರಕಾರಿ ರಸ್ತೆಗಳು, ಗುಂಡು ತೋಪು ಮುಂತಾದವುಗಳು ಹಾಗೂ ಸರಕಾರಿ ಕೆರೆ ಮತ್ತು ಸ್ಮಶಾನಗಳನ್ನು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳು ಲ್ಯಾಂಡ್ ಬೀಟ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಕ್ಷೇತ್ರ ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಈಗಾಗಲೇ ರಾಜ್ಯ ಕಂದಾಯ ಆಯುಕ್ತಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಈ ಮೂರು ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಲಾಗುತ್ತಿದ್ದು, ಈ ಕುರಿತು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನಿಯಮಾನುಸಾರ ಕ್ರಮ ವಹಿಸಲು ಅಗತ್ಯ ಮಾರ್ಗದರ್ಶನ ನೀಡಲು ಕಂದಾಯ ಆಯುಕ್ತಾಲಯ ಸೂಚನೆ ನೀಡಿದೆ.