ಕೊಪ್ಪಳ: ಒಂದೇ ಕುಟುಂಬಕ್ಕೆ ಸೇರಿದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೊಸಲಿಂಗಾಪುರದ ರಾಜೇಶ್ವರಿ (50), ವಸಂತಾ (28) ಹಾಗೂ ವಸಂತಾ ಅವರ ಪುತ್ರ ಸಾಯಿಧರ್ಮ ತೇಜ್ (5) ಮೃತಪಟ್ಟವರೆಂದು ಗುರುತಿಸಲಾಗಿದೆ.
ವಸಂತಾ ಅವರಿಗೆ ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದ ಯುವಕನ ಜತೆ ಮದುವೆ ಮಾಡಲಾಗಿತ್ತು. ಗಂಡನಿಂದ ದೂರವಾದ ವಸಂತಾ ಕಳೆದ ಎರಡು ವರ್ಷಗಳಿಂದ ಹೊಸಲಿಂಗಾಪುರದಲ್ಲಿ ಬಾಡಿಗೆ ಮನೆ ಮಾಡಿ ತಾಯಿ ಹಾಗೂ ಮಗನ ಜತೆ ವಾಸವಾಗಿದ್ದರು. ಸೋಮವಾರ ರಾತ್ರಿ ರಾಜೇಶ್ವರಿ ಅವರಿಗೆ ಇನ್ನೊಬ್ಬಳು ಮಗಳು ಮೊಬೈಲ್ ಕರೆ ಮಾಡಿದ್ದಳು. ಆದರೆ ಇತ್ತ ಕಡೆ ರಾಜೇಶ್ವರಿ ಅವರು ಕರೆ ಸ್ವೀಕರಿಸಿಲ್ಲ. ಹಾಗಾಗಿ ಮಂಗಳವಾರ ಬೆಳಗ್ಗೆ ಮಗಳು ಬಂದು ನೋಡುವಾಗ ಮೂವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ರಾಜೇಶ್ವರಿ ಹಾಗೂ ಸಾಯಿಧರ್ಮ ತೇಜ್ ಅವರ ಶವ ಬೆಡ್ ರೂಮ್ ನಲ್ಲಿ ಹಾಗೂ ವಸಂತ ಅವರ ಶವ ಕಿಚನ್ ನಲ್ಲಿ ಪತ್ತೆಯಾಗಿದೆ.
ಇದೊಂದು ಕೊಲೆ ಕೃತ್ಯವಿರಬೇಕೆಂದು ಶಂಕಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
























