ಪುತ್ತೂರು: ಕ್ರೀಡೆ ಎನ್ನುವುದು ನಮ್ಮ ಸದೃಢ ಆರೋಗ್ಯಕ್ಕೆ ಬಹಳ ಸಹಕಾರಿ. ದೇಹಕ್ಕೆ ಸಮರ್ಪಕವಾದ ವ್ಯಾಯಾಮ ಸಿಕ್ಕಾಗ ನಮ್ಮ ಮಾನಸಿಕ ಆರೋಗ್ಯವು ಕೂಡಾ ವೃದ್ಧಿಯಾಗುತ್ತದೆ. ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಉಪ್ಪಿನಂಗಡಿ ಎಸ್ ಬಿ ಐ ಬ್ಯಾಂಕ್ ನಿವೃತ್ತ ಉದ್ಯೋಗಿ ಜಿ. ಕೆ ಪೂವಪ್ಪ ಹೇಳಿದರು.
ಅವರು ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಮತ್ತು ವಿವೇಕಾನಂದ ಕಾಲೇಜು (ಸ್ವಾಯತ್ತ) ಸಂಯುಕ್ತ ಆಶ್ರಯದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪುರುಷರ 8 ತಂಡಗಳ ಲೀಗ್ ಮಾದರಿಯ ಖೋ-ಖೋ ಚಾಂಪಿಯನ್ ಶಿಪ್ ಸೀಸನ್ 2024 ನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಗಣಪತಿ ಭಟ್ ಮಾತನಾಡಿ, ಇಂತಹ ಪಂದ್ಯಾಟಗಳು ಒಳ್ಳೆಯ ಕ್ರೀಡಾಪಟುಗಳನ್ನು ಬೆಳೆಸಲು ದಾರಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆ ಗಳನ್ನು ಅನಾವರಣಗೊಳಿಸಲು ಇದೊಂದು ಒಳ್ಳೆಯ ವೇದಿಕೆ. ಆದ್ದರಿಂದ ಪಂದ್ಯಾಟ ಆಯೋಜನೆ ಮಾಡಿದ ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯ ಶ್ಲಾಘನೀಯ ಎಂದರು.
ವಿವೇಕಾನಂದ ಸ್ವಾಯತ್ತ ಕಾಲೇಜಿನ ದೈಹಿಕ ನಿರ್ದೇಶಕ ರವಿಶಂಕರ್ ವಿ.ಎಸ್. ಶುಭ ಹಾರೈಸಿದರು. ವೇದಿಕೆಯಲ್ಲಿ ದೈವ ನರ್ತಕ ಓಬಯ್ಯ ಪರವಾನ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಜ್ಯೋತಿ ಕುಮಾರಿ ಪಿ.ಸಿ., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಕುಮಾರ್ ಬಿ ಉಪಸ್ಥಿತರಿದ್ದರು.
ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಕೀರ್ತನ್ ಸ್ವಾಗತಿಸಿ, ಅಲ್ಟಿಮೇಟ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಕಾರ್ತಿಕ್ ವಂದಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ದೀಪ್ತಿ ಅಡ್ಡಂತ್ತಡ್ಕ ನಿರ್ವಹಿಸಿದರು.
ಸಮಾರೋಪ ಸಮಾರಂಭದಲ್ಲಿ ದೆಹಲಿಯ ಸಿಬಿಎಸ್‌ಸಿ ಇಂಟರ್ ನ್ಯಾಷನಲ್ ಸ್ಕೂಲ್ ನ ದೈಹಿಕ ನಿರ್ದೆಶಕ, ರಾಷ್ಟ್ರ ಮಟ್ಟದ ಖೋ ಖೋ ಆಟಗಾರ ಶಿವರಾಮ ವಿಜೇತ ತಂಡ ವಿಸಿ ಕ್ಯಾಪಿಟಲ್ ಗೆ ಟ್ರೋಫಿ ಹಸ್ತಾಂತರಿಸಿದರು.