ಪುತ್ತೂರು: ಒಂದು ಕಾಲದಲ್ಲಿ ಕಾಡಿನಲ್ಲಿ ಬೆಳೆದು, ಹೊಟ್ಟೆಗಿಲ್ಲದ ಬಡವರು ಉಪಯೋಗಿಸುತ್ತಿದ್ದ ಹಲಸಿನ ಹಣ್ಣುಗಳಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಹಾಗೂ ಪ್ರದರ್ಶನ ಮಾಡುತ್ತಿರುವ ನಿಟ್ಟಿನಲ್ಲಿ ಹಲಸು ಮೇಳ ಆಯೋಜಿಸುತ್ತಿರುವುದು ಅಭಿನಂದನೀಯ ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ನವತೇಜ ಪುತ್ತೂರು, ಜೆಸಿಐ, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಅಡಿಕೆ ಪತ್ರಿಕೆ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡ ಹಲಸು ಹಾಗೂ ಹಣ್ಣುಗಳ ಮೇಳದಲ್ಲಿ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲಸಿನ ಹಣ್ಣಿನ ವಿವಿಧ ಖಾದ್ಯ ಸಹಿತ ವಿವಿಧ ಉತ್ಪನ್ನಗಳನ್ನು ಒಂದೇ ಸೂರಿನಡಿ ಜನಸಾಮಾನ್ಯರಿಗೆ ಸಿಗುವಂತೆ ಮೇಳಗಳ ಮೂಲಕ ಇಂದು ಮಾಡಲಾಗುತ್ತಿದೆ. ಜತೆಗೆ ವಿವಿಧ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ರು ಮಾಡಲಾಗುತ್ತಿದ್ದು, ಇದಕ್ಕೆ ಪ್ರೋತ್ಸಾಹ ಪ್ರತಿಯೊಬ್ಬನಿಂದಲೂ ಸಿಗಬೇಕು ಎಂದು ತಿಳಿಸಿದರು.
ಮಾಜಿ ಎಂಎಲ್ ಸಿ ಅಣ್ಣಾ ವಿನಯಚಂದ್ರ ಮಾತನಾಡಿ, ಒಂದು ಕಾಲದಲ್ಲಿ ಹಲಸಿನ ಹಣ್ಣು ಆಹಾರ ವಸ್ತುವಾಗಿದ್ದರೂ ಉತ್ವನ್ನಗಳ ತಯಾರಿಕೆ ಇಲ್ಲವಾಗಿತ್ತು. ಪ್ರಸ್ತುತ ಕಳೆದ ಹಲವಾರು ವರ್ಷಗಳಿಂದ ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳು ಗಮನ ಸೆಳೆದಿದೆ. ಈ ಮೂಲಕ ಹಲಸಿನ ಹಣ್ಣಿಗೆ ಬೇಡಿಕೆಯೂ ಬಂದಿದೆ. ಇದೀಗ ಇಲ್ಲಿ ಆಯೋಜಿಸುತ್ತಿರುವುದು ಕೇವಲ ಮೇಳ ಅಲ್ಲ ಒಂದು ಹಬ್ಬವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜೆಸಿಐ ಮಾಜಿ ಅಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು, ನವತೇಜದ ಸುಹಾಸ್ ಮರಿಕೆ ಉಪಸ್ಥಿತರಿದ್ದರು. ಅಡಿಕೆ ಪತ್ರಿಕೆಯ ನಾ.ಕಾರಂತ ಪೆರಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನವತೇಜದ ಅನಂತ ಕುಮಾರ್ ನೈತಡ್ಕ ವಂದಿಸಿದರು.
ಮೇಳದಲ್ಲಿ ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳು, ವಿವಿಧ ಹಣ್ಣುಗಳಾದ ವಿವಿಧ ತಳಿಯ ಮಾವುಗಳು, ರಂಬುಟಾನ್, ವಿವಿಧ ತಳಿಯ ಹಲಸಿನ ಗಿಡಗಳು, ಕೃಷಿ ಉಪಕರಣಗಳು, ಗಾಣದಿಂದ ತಯಾರಿಸಿದ ಎಣ್ಣೆ, ಉತ್ತಮ ಗುಣಮಟ್ಟದ ಜೇನು, ಇನ್ನಿತರ ವಸ್ತುಗಳು ಹಲವಾರು ಮಳಿಗೆಗಳಲ್ಲಿ ಮಾರಾಟ ನಡೆದವು.