ಹೊಸದಿಲ್ಲಿ: ಕಾಂಬೋಡಿಯಾದಲ್ಲಿ ಉದ್ಯೋಗದ ಮೋಸದ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರನ್ನು ಅಲ್ಲಿನ ಭಾರತೀಯ ರಾಯಭಾರ ಕಚೇರಿ ರಕ್ಷಣೆ ಮಾಡಿದೆ. ರಕ್ಷಣೆ ಮಾಡಿದ ಬೆನ್ನಲ್ಲೇ 60 ಮಂದಿಯ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸಿಹಾನೌಕ್ವಿಲೈನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಿನ್ ಬೆ-4 ಎಂಬ ಸ್ಥಳದಲ್ಲಿ ಭಾರತೀಯರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಮುಂದೆ ಉದ್ಯೋಗಕ್ಕಾಗಿ ಕಾಂಬೋಡಿಯಾಕ್ಕೆ ಬರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರವೇ ಉದ್ಯೋಗ ಪಡೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ನಮ್ಮ ಅಧಿಕಾರಿಗಳ ತಂಡ ವಿದೇಶದಲ್ಲಿರುವ ಭಾರತೀಯರಿಗೆ ಯಾವಾಗಲು ಸಹಾಯಕ್ಕೆ ಬದ್ಧವಾಗಿದೆ. ಸದ್ಯ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ್ದ 60 ಮಂದಿಯನ್ನ ರಕ್ಷಿಸಿದ್ದೇವೆ. ಅವರಿಂದು ಸ್ವದೇಶಕ್ಕೆ ಮರಳಿದ್ದಾರೆ. ಅದಕ್ಕಾಗಿ ನಮ್ಮ ಇಡೀ ಅಧಿಕಾರಿಗಳ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದೆ.
ಕಾಂಬೋಡಿಯಾದಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರು ಅನಧಿಕೃತ ಏಜೆಂಟ್ ಗಳಿಗೆ ಬಲಿಯಾಗದಂತೆ ರಾಯಬಾರಿ ಕಚೇರಿ ಎಚ್ಚರಿಕೆ ನೀಡಿದೆ.