ಸುಳ್ಯ: ಕಳೆದ ಒಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಜೀವನದಿ ಪಯಸ್ವಿನಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ. ಈ ಹಿನ್ನಲೆಯಲ್ಲಿ ಸುಳ್ಯಕ್ಕೆ ನೀರು ಸರಬರಾಜು ಮಾಡುವ ಕಲ್ಲುಮುಟ್ಲುವಿನ ಪಂಪ್ ಹೌಸ್ ಸಮೀಪದ ಡ್ಯಾಂನ ಎಲ್ಲಾ ಗೇಟ್‌ಗಳು ತೆರವು ಮಾಡಲಾಗಿದೆ. ನದಿಯಲ್ಲಿ ಮತ್ತೆ ನೀರಿನ ಹರಿವು ಹೆಚ್ಚಳಗೊಂಡಿದ್ದು ಜೀವನದಿಗೆ ಮತ್ತೆ ಜೀವಕಳೆ ಬಂದಿದೆ.
ಬರಡಾಗಿದ್ದ ನದಿಯ ಒಡಲು ಮತ್ತೆ ನೀರು ತುಂಬಿಕೊಂಡಿದೆ. ಕಳೆದ ಹಲವಾರು ದಿನಗಳಿಂದ ಬತ್ತಿ ಬರಡಾಗಿ ಕಲ್ಲುಗಳೇ ಪ್ರತ್ಯಕ್ಷವಾಗುತ್ತಿದ್ದ ಮೈದಾನದಂತೆ ಭಾಸವಾಗಿದ್ದ ನದಿಯ ಒಡಲಿನಲ್ಲಿ ಜೀವಜಲ ಹರಿದಿದೆ. ಕಳೆದ ಒಂದು ವಾರದಿಂದ ಎಲ್ಲೆಡೆ ವ್ಯಾಪಕ ಮಳೆಯಾಗಿತ್ತು. ಉತ್ತಮ ಮಳೆ ಬಂದಿರುವ ಕಾರಣ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಕಲ್ಲುಮುಟ್ಟುವಿನಲ್ಲಿ 17 ಕೋಟಿ ರೂ ವೆಚ್ಚದಲ್ಲಿ ಡ್ಯಾಂ ನಿರ್ಮಾಣ ಆಗಿದೆ. ಕಳೆದ ಡಿಸೆಂಬರ್‌ನಲ್ಲಿ ಗೇಟ್ ಹಾಕಿ ನೀರು ಸಂಗ್ರಹ ಮಾಡಲು ಆರಂಭಿಸಲಾಗಿತ್ತು. ಇದೀಗ ನದಿಯಲ್ಲಿ ನೀರಿನ ಹರಿವು ಹೆಚ್ಚಿದ ಕಾರಣ ಡ್ಯಾಂ ಗೇಟು ತೆರೆಯಲಾಗಿದೆ.