ಪುತ್ತೂರು: ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿಯು ವಿದ್ಯಾರ್ಥಿ ಧನ್ವಿತ್ ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿಯ (ಆರ್‌ಎಲ್‌ಎಸ್‌ಎಸ್) ವತಿಯಿಂದ ನಡೆಸಲ್ಪಟ್ಟ ಭಾರತ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಲೈಫ್ ಸೇವಿಂಗ್ ವರ್ಲ್ಡ್ ಚಾಂಪಿಯನ್ ಶಿಪ್‌ನ ಆಯ್ಕೆ ಪ್ರಕ್ರಿಯೆಯು ವಿಶಾಖಪಟ್ಟಣದಲ್ಲಿ ಮೇ ತಿಂಗಳ 15, 16 ಹಾಗೂ 19 ರಂದು ನಡೆದಿತ್ತು. 200 ಮೀ. ಅಬ್ಸ್ಟೆಕಲ್, 200 ಮೀ. ಸೂಪರ್ ಲೈಫ್ ಸೇವರ್ ಹಾಗೂ 100 ಮೀ. ಮನಿಕಿನ್ ಕಾರಿ ಹಾಗೂ ಒಂದು ಕಿಲೋಮೀಟರ್ ಬೀಚ್ ರನ್ನಿಂಗ್ ನಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಅಗೋಸ್ಟ್ ತಿಂಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾರತದ ಪರವಾಗಿ ಸ್ಪರ್ಧಿಸಲಿದ್ದಾರೆ.
ಧನ್ವಿತ್ ಪುತ್ತೂರು ದರ್ಬೆಯ ಕೇಶವ ಕುಮಾರ್ ಕೆ. ಹಾಗೂ ಮೀನಾಕ್ಷಿ ದಂಪತಿ ಪುತ್ರ. ಪುತ್ತೂರಿನ ಬಾಲವನ ಈಜುಕೊಳದ ತರಬೇತುದಾರರಾದ ಪಾರ್ಥ ವಾರಣಾಸಿ, ರೋಹಿತ್ ಪಿ. ಹಾಗೂ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ತರಬೇತು ಪಡೆಯುತ್ತಿದ್ದಾರೆ.