ಬೆಂಗಳೂರು : ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ 24 ಗಂಟೆಯೊಳಗೆ ನಿವೃತ್ತಿ ಘೋಷಿಸಿ ಇಲ್ಲವೇ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಕೆ ರಘುಪತಿ ಭಟ್‌ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಕರಾವಳಿಗೆ ಅನ್ಯಾಯವಾದರೆ ಪಕ್ಷದೊಳಗೆ ಮಾತನಾಡಿ ಸರಿಪಡಿಸಬಹುದು. ಅವಕಾಶ ನೀಡಿದ ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದಿದ್ದಾರೆ. ಮಾಜಿ ಶಾಸಕ, ವಿಧಾನಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ರಘುಪತಿ ಭಟ್ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ನಾಯಕರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಮೂರು ಬಾರಿ ಶಾಸಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪ್ರಭಾರಿಯಾಗಿದ್ದ ಕೆ ರಘುಪತಿ ಭಟ್ಟರಿಗೆ ಪಕ್ಷದಿಂದ ಅನ್ಯಾಯವಾಗಿಲ್ಲ. ಪಕ್ಷದೊಳಗೆ ಮಾತನಾಡದೆ ಸಮಸ್ಯೆಗೆ ಬಂಡಾಯ ಉತ್ತರವಲ್ಲ. ಚುನಾವಣೆ ಬಳಿಕ ಪಕ್ಷ ಸೇರ್ಪಡೆ ಕುರಿತು ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ವಿಧಾನ ಪರಿಷತ್ ಮತದಾರರ ನೋಂದಣಿಯನ್ನು ರಘುಪತಿ ಭಟ್ ಪಕ್ಷಕ್ಕಾಗಿ ಮಾಡಿದ್ದಾರೆಯೇ ಹೊರತು ಸ್ವಂತಕ್ಕಾಗಿ ಅಲ್ಲ. ಭಟ್ ಜತೆ ಹೋದವರನ್ನು ಗುರುತಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.