ಪುತ್ತೂರು: ಖ್ಯಾತ ಕೃಷಿ ಉಪಕರಣಗಳ ತಯಾರಿಕಾ ಸಂಸ್ಥೆ ಎಸ್ ಆರ್ ಕೆ. ಲ್ಯಾಡರ್ಸ್ ನ ರಜತ ಸಂಭ್ರಮದ ಸಮಾರೋಪ ಸಮಾರಂಭ ವಿವಿಧ ಸಾಂಸ್ಕೃತಿ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಕಡಬ ತಾಲೂಕಿನ ಕೊಯಿಲ ಗ್ರಾಮದ ಕಲಾಯಿಗುತ್ತುವಿನಲ್ಲಿ ನಡೆಯಲಿದೆ ಎಂದು ಎಸ್ ಆರ್ ಕೆ. ಲ್ಯಾಡರ್ಸ್ ಸಂಸ್ಥೆಯ ಮಾಲಕ ಕೇಶವ ಅಮೈ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸ್ಥೆ 24 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ನವೆಂಬರ್ 2023 ಕ್ಕೆ ಸಂಸ್ಥೆಯ ರಜತ ಸಂಭ್ರಮಕ್ಕೆ ಕಾಲಿಟ್ಟಿದೆ. ಈ ನಿಟ್ಟಿನಲ್ಲಿ 10 ಸರಣಿ ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಲಾಗಿದೆ. ನ.28 ರಂದು ಮೊದಲ ಸರಣಿ ಕಾರ್ಯಕ್ರಮವಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಬಳಿಕ ಶಾಲೆಗಳಿಗೆ ವಿಶೇಷ ಕೊಡುಗೆ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಶಿಕ್ಷಕರಿಗೆ ಗೌರವ ಸನ್ಮಾನ, ಬನ್ನೂರು ಶಾಲಾ ಕೊಠಡಿ ದುಸ್ಥಿತಿಯಲ್ಲಿರುವುದನ್ನು ಮನಗಂಡು ಸಂಸ್ಥೆಯ ಸಿಬ್ಬಂದಿಗಳಿಂದ ಶ್ರಮದಾನದ ಮೂಲಕ ದುರಸ್ತಿ ಕಾರ್ಯ, ಶಿವರಾಮ ಕಾರಂತ ಶಾಲೆಯಲ್ಲಿ ಹದಿಹರೆಯದ ಮಕ್ಕಳಿಗೆ ಆರೋಗ್ಯದ ಕುರಿತು ಮಾಹಿತಿ ಕಾರ್ಯಕ್ರಮದ, ಸರಕಾರ ಆಸ್ಪತ್ರೆಯ ರೋಗಿಗಳಿಗೆ ಹಾಲು-ಹಣ್ಣು ವಿತರಣೆ, ಸಂಸ್ಥೆಯ ಸಿಬ್ಬಂದಿಗಳಿಗೆ ಕ್ರೀಡಾ ಸಂಭ್ರಮ, ಕೊಯಿಲ ತಳಿಸಂವರ್ಧನ ಜಾನುವಾರು ಕೇಂದ್ರದ ಶ್ರಮಿಕರಿಗೆ ಕೊಡುಗೆಗಳು ಸೇರಿದಂತೆ ಹತ್ತು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ತಿಳಿಸಿದರು.
ರಜತ ಸಂಭ್ರಮ ಮಧ್ಯಾಹ್ನ 2 ಗಂಟೆಯಿಂದ ಆರಂಭಗೊಳ್ಳಲಿದ್ದು, ಆರಂಭದಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿoದ ಭಜನಾ ಕಾರ್ಯಕ್ರಮ , ಮಂಗಳೂರು ಸಿಂಗಾರಿ ಮೇಳದವರಿಂದ ಚೆಂಡೆ ವಾದನ, ಯಶ್ವಿನ್ ದೇವಾಡಿಗ ನಿರ್ದೆಶನದಲ್ಲಿ ನೃತ್ಯ ವೈವಿದ್ಯ, ಸರಿಗಮಪ ಖ್ಯಾತಿಯ ಪ್ರಜ್ಞಾ ರೈ ಹಾಗೂ ಸಮನ್ವಿ ಪುತ್ತೂರು ಅವರಿಂದ ಸುಮಧುರ ಗಾಯನ, ತುಳು ಕನ್ನಡ ಚಿತ್ರರಂಗದ ತಾರೆಯರ ಸಮಾಗಮ, ಬೆಂಗಳೂರಿನ ರಿಚರ್ಡ್ ಲೂಯಿಸ್, ಮಿಮಿಕ್ರಿ ಗೋಪಿ, ಅಸದುಲ್ಲಾಖಾನ್, ಕಿರ್ಲೊಸ್ಕರರ್ ಸತ್ಯ, ಮೈಸೂರ್ ಆನಂದ್ ಅವರಿಂಸ ಹಾಸ್ಯ ರಸಸಂಜೆ, ತೆಂಕುತಿಟ್ಟು ಪ್ರಸಿದ್ದ ಹಾಸ್ಯ ಕಲಾವಿದರಿಂದ ತುಳು ಯಕ್ಷ ತೆಲಿಕೆ, ವಿಶೇಷ ಸುಡುಮದ್ದು ಪ್ರದರ್ಶನ, ಕಾರ್ಯಕ್ರಮದ ಮಧ್ಯೆ ವಿಶೇಷ ಶೈಲಿಯ ಉಪಹಾರ, ರಾತ್ರಿ ಸ್ನೇಹಕೂಟ ಸಹಭೋಜನ ನಡೆಯಲಿದೆ.
ಸಭಾ ಕಾರ್ಯಕ್ರಮ:
ಸಂಜೆ ನಡೆಯುವ ಸಭಾಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದಲ್ಲಿ ವಿಧನಾಸಭಾ ಸ್ಪೀಕರ್ ಯು.ಟಿ ಖಾದರ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕ ಅಶೋಕ್ ರೈ , ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಗೋಕುಲ್‌ದಾಸ್, ಕೊಯಿಲ ಜಾನುವಾರು ಸಂವರ್ಧನ ಕೇಂದ್ರದ ಉಪನಿರ್ದೇಶಕರಾದ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್, ಉದ್ಯಮಿ ವಿನೋದ್ ಎಂ ಶಿರ್ಲೇಕರ್, ಸಿರ್ಸಿ ತೋಟಗಾರಿಕೆ ಲಿಮಿಟಿಡ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಆದಿ ಶಕ್ತಿ ಲ್ಯಾಡರ್‍ಸ್ ಬರೆಪ್ಪಾಡಿ ಇದರ ಮಾಲಕರಾಗಿರುವ ಚಂದ್ರಶೇಖರ್ ಬರೆಪ್ಪಾಡಿ ಸೇರಿದಂತೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಸತೀಶ್ ಭಟ್, ಅಬ್ರಹಾಂ, ಲೋಕೇಶ್ ಬನ್ನೂರು ಉಪಸ್ಥಿತರಿದ್ದರು.