ಬೆಳ್ತಂಗಡಿ: ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.
ತಾಲೂಕು ಕಚೇರಿ ಎದುರು ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ ಬೆಳ್ತಂಗಡಿ ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ, ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಕೆ ಹಾಕಿದ್ದರು. ಇದೀಗ ಪೊಲೀಸರಿಗೆ ಜೀವ ಬೆದರಿಕೆ ಒಡ್ಡಿದ ಹಾಗೂ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರಿಗೂ ತಡೆದ ಆರೋಪದ ಮೇಲೆ ಐಪಿಸಿ ಸೆಕ್ಷನ್ 143, 147, 341, 504, 506 ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ದರ್ಪ ಪ್ರದರ್ಶಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಮೇಲೆ ದಾಳಿ ನಡೆಸಿ, ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಜೊತೆಗೆ ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ (35) ಬಂಧಿಸಿದ್ದರು. ಬಂಧಿತ ಆರೋಪಿ ಶಶಿರಾಜ್ ರೌಡಿಶೀಟರ್ ಕೂಡ ಆಗಿದ್ದ. ಆದರೆ, ಶಶಿರಾಜ್ ಪರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಕಾಲತ್ತು ವಹಿಸಿ, ಮೇ.18ರಂದು ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ ಪೊಲೀಸರ ವಿರುದ್ಧ ದರ್ಪ ಪ್ರದರ್ಶಿಸಿದ್ದರು. ಇದೀಗ ಶಾಸಕ ಹರೀಶ್ ಪೂಂಜಾ ವಿರುದ್ದ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.