800 ವರ್ಷ ಹಿಂದಿನ ಕನ್ನಡ ಶಾಸನ ಪತ್ತೆ : ದ ಕ ಜಿಲ್ಲಾ ಕ.ಸಾ.ಪ  – “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆ -2

ಪುತ್ತೂರು: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ  ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ.

ಈ ಶಿಲಾ ಶಾಸನವು ಸುಮಾರು 30 ಇಂಚು ಎತ್ತರ ಹಾಗೂ 16 ಇಂಚು ಅಗಲ , 4 ಇಂಚು ದಪ್ಪ ಇದೆ. ಶಾಸನದ ಮುಖ್ಯ ಪಠ್ಯವನ್ನು 14 ಇಂಚು ಅಗಲ ಹಾಗೂ 17 ಇಂಚು ಎತ್ತರದ ಅಳತೆಯಲ್ಲಿ  ಶಿಲೆಯನ್ನು ಅರ್ಧ ಇಂಚು ಒಳಭಾಗಕ್ಕೆ ಕೊರೆದು ಹೊರ ಭಾಗದಲ್ಲಿ  ಚೌಕ ಆಕಾರದ ಉಬ್ಬು ಪಟ್ಟಿ ನೀಡಿ ಒಳ ಭಾಗವನ್ನು  ಸಮತಟ್ಟಾಗಿ ಮಾಡಿ  ಅಕ್ಷರಗಳನ್ನು ಕೆತ್ತಲಾಗಿದೆ.ಶಾಸನದ ಕೆಳಭಾಗವು  ಅಂದರೆ ಭೂಮಿಯ ಒಳಗೆ ಹೂತು ಹಾಕುವ ಭಾಗವು 15 ಇಂಚು ಇದೆ.

ಶಾಸನದ  17 ಇಂಚು ಮೇಲೆ ಹೋದಂತೆ  ಶಾಸನವು ಅರ್ಧಚಂದ್ರಾಕೃತಿ ಆಕಾರವನ್ನು ಪಡೆದಿದ್ದು, ಶಾಸನದ ಶಿರೋ ಭಾಗದ ಮಂಟಪದ  ಮಧ್ಯದಲ್ಲಿ ಒಂದು ನವಿಲಿನ ಆಕೃತಿಯನ್ನು, ಅದರ ಬಲ ಭಾಗದಲ್ಲಿ ಸೂರ್ಯ ಹಾಗೂ ಸಣ್ಣ ದೀಪ, ಎಡ ಭಾಗದಲ್ಲಿ  ಅರ್ಧಚಂದ್ರ ಹಾಗೂ ಸ್ವಲ್ಪ ದೊಡ್ಡದಾದ ಉರಿಯುತ್ತಿರುವ  ದೀಪದ ಆಕೃತಿಯನ್ನು ಕೆತ್ತಲಾಗಿದೆ.



































 
 

ಈ ಶಾಸನದಲ್ಲಿ ಸುಮಾರು 15 ಸಾಲುಗಳಿದ್ದು  ಕನ್ನಡ ಲಿಪಿಯಲ್ಲಿ ಶಾಸನವನ್ನು ಕೆತ್ತಲಾಗಿದೆ. ಲಿಪಿಯು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸ್ವಸ್ತಿ ಶ್ರೀ ಎಂದು ಪ್ರಾರಂಭವಾಗುವ  ಈ ಶಾಸನದಲ್ಲಿ ನೀರು ಲಭ್ಯವಾಗಲು  ಮಹಾಯಾಗವನ್ನು ನಡೆಸಿದ ಉಲ್ಲೇಖವಿದೆ, ಹಾಗೂ ಕುಕ್ಕೆಯ ದೈವಗಳು ಎಂಬ ಪದದ ಉಲ್ಲೇಖವಿದೆ. ಮಾತ್ರವಲ್ಲದೆ, ಶಾಸನದಲ್ಲಿ  ‘ತುಳು ರಾಜ್ಯ’ ಎಂಬ ಪದದ ಪ್ರಯೋಗವಾಗಿದ್ದು, ಇದು ತುಳು ನಾಡಿನ ಭವ್ಯ ಪರಂಪರೆಯನ್ನು ಪುಷ್ಟೀಕರಿಸುವ ಮಹತ್ವದ ದಾಖಲೆಯು ಇದಾಗಿದೆ ಎನ್ನಬಹುದು.

ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನ ರಾಜ್ ಭಟ್, ವಿವೇಕಾನಂದ ಬಿ.ಎಡ್ ಕಾಲೇಜಿನ ಉಪನ್ಯಾಸಕಿ  ಶ್ರೀಮತಿ ರಾಜೀವಿ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಅಧ್ಯಯನ ತಂಡದಲ್ಲಿ ಸಹಕರಿಸಿದರು.

ಶಾಸನ ಅಧ್ಯಯನದ ಸಮಯದಲ್ಲಿ  ದೇವಸ್ಥಾನದ ಆಡಳಿತ ಮೊಕ್ತೇಸರಾದ ಶ್ರೀ ಸುಬ್ರಹ್ಮಣ್ಯ ಬಾಳ್ತಿಲ್ಲಾಯ, ಅರ್ಚಕರಾದ ಎನ್. ಕೆ ಅನಂತಪದ್ಮನಾಭ ನೂಜಿನ್ನಾಯ , ಪತ್ರಕರ್ತರಾದ ಸುಧೀರ್ ಕುಮಾರ್, ಭಜಕರಾದ ಸತೀಶ್ ಕೆ.ಎನ್ ಹಾಗೂ ಅನುದೀಪ ಬಾಳ್ತಿಲ್ಲಾಯ, ರವಿ ಮುಂತಾದವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top