ಪುತ್ತೂರು: ನವತೇಜ ಟ್ರಸ್ಟ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಹಾಗೂ ಪುತ್ತೂರು ಜೆಸಿಐ ಸಂಯುಕ್ತ ಆಶ್ರಯದಲ್ಲಿ 7ನೇ ವರ್ಷದ ಹಲಸು ಮತ್ತು ಹಣ್ಣುಗಳ ಮೇಳ ಮೇ. 24, 25 ಹಾಗೂ 26 ರಂದು ಜೈನ ಭವನದಲ್ಲಿ ನಡೆಯಲಿದೆ ಎಂದು ನವತೇಜ ಟ್ರಸ್ಟ್ ನ ಅನಂತ ಕುಮಾರ್ ನೈತಡ್ಕ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಳದ ಮೂಲಕ ಯಾರಿಗೂ ಬೇಡವಾದ ಹಲಸಿನ ಹಣ್ಣು ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಬರಬೇಕು ಈ ಮೂಲಕ ಆರ್ಥಿಕ ಶಕ್ತಿಯಾಗಿ ದೇಶ-ವಿದೇಶಗಳಲ್ಲಿ ಹೊರಹೊಮ್ಮುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಜತೆಗೆ ಸಂಶೋಧನ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವುದು ಮೇಳದ ಮತ್ತೊಂದು ಉದ್ದೇಶವಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳಲ್ಲದೆ, ಪ್ರಸಿದ್ಧ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಿದ ತಳಿಗಳು ಹಾಗೂ ಇತರ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಹಲಸಿನ ಹಣ್ಣಿನ ವಿವಿಧ ಖಾದ್ಯಗಳಾದ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ರೊಟ್ಟಿ, ಕೇಕ್, ಹಲ್ವ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸೆಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ ಕ್ರೀಂ ಹೀಗೆ ಹತ್ತು ಹಲವು ಬಗೆ ಖಾದ್ಯಗಳನ್ನು ಗ್ರಾಹಕ ವರ್ಗಕ್ಕೆ ಉಣಬಡಿಸಲಾಗುವುದು.
ಮೇ 24 ರಂದು ಬೆಳಿಗ್ಗೆ ವಿವಿಧ ಮಳಿಗೆಗಳನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಉದ್ಘಾಟಿಸುವರು. ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶುಭಾಶಂಸನೆ ಮಾಡುವರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸುವರು. ಪುತ್ತೂರು ಅಡಿಕೆ ಪತ್ರಿಕೆ ಪ್ರಕಾಶಕ ಪಡಾರು ರಾಮಕೃಷ್ಣ ಶಾಸ್ತ್ರಿ ಫಲಪ್ರದ ಪುಸ್ತಕ ಅನಾವರಣ ಮಾಡುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಭಾರತೀಯ ಗೇರು ಸಂಶೋಧನಾಲಯ ನಿರ್ದೇಶಕ ಡಾ. ದಿನಕರ ಅಡಿಗ, ಬನ್ನೂರು ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಹಲಸು ಸ್ನೇಹಿ ಕೂಟದ ಮುಳಿಯ ವೆಂಕಟಕೃಷ್ಣ ಶರ್ಮ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಮೇ 25 ಶನಿವಾರ ಬೆಳಿಗ್ಗೆ ನಡೆಯುವ ಗೋಷ್ಠಿಯಲ್ಲಿ ಮಾತೃತ್ವಂ ಶ್ರೀ ರಾಮಚಂದ್ರ ಮಠದ ಅಧ್ಯಕ್ಷ ಈಶ್ವರೀ ಶ್ಯಾಮ ಭಟ್ ಬೇರ್ಕಡವು ಅಧ್ಯಕ್ಷತೆ ವಹಿಸುವರು. ನಾಡು ಮಾವು ಸಂರಕ್ಷಣೆಗಾರ ಡಾ. ಮನೋಹರ ಉಪಾಧ್ಯ, ಸುಳ್ಯ ನಾಡು ಮಾವು ಸಂರಕ್ಷಣೆಗಾರ ಜಯರಾಮ ಮುಂಡೋಳಿಮುಲೆ, ಪುಣಚ ಕೊಕ್ಕೋ ಮೌಲ್ಯವರ್ಧನೆಗಾರ ನವೀನ ಕೃಷ್ಣ ಶಾಸ್ತ್ರಿ ರಂಬುಟಾನ್ ಕೃಷಿ ಮಾರುಕಟ್ಟೆಯ ವಿಶ್ವಪ್ರಸಾದ್ ಸೇಡಿಯಾಪು, ಮಾಪಲತೋಟ ಸುಬ್ರಾಯ ಭಟ್ ಮರ್ಕಂಜ ಸುಳ್ಯ, ಪುತ್ತೂರು ಶಿಬರ ನವನೀತ ನರ್ಸರಿಯ ವೇಣುಗೋಪಾಲ್ ಎಸ್.ಜೆ. ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೇ 26 ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಸುದ್ದಿ ಬಿಡುಗಡೆ ಸಂಪಾದಕ ಡಾ. ಯು. ಪಿ. ಶಿವಾನಂದ ವಹಿಸಲಿದ್ದು, ಪುತ್ತೂರು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಮ್ಹಾಲಕ ಬಲರಾಮ ಆಚಾರ್ಯ, ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಸಂಘಟನಾ ಕಾರ್ಯದರ್ಶಿ ರತ್ನಾಕರ ಕುಳಾಯಿ, ಪುತ್ತೂರು ಸಮೃದ್ಧಿ ಗಿಡಗೆಳೆತನ ಸಂಘದ ಅಧ್ಯಕ್ಷ ನಿರಂಜನ ಪೋಳ್ಯ, ಜೇಸಿ ವಲಯ 15 ವಲಯ ಉಪಾಧ್ಯಕ್ಷ ಜೇಸಿ ಶಂಕರ ರಾವ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನವತೇಜದ ಸುಹಾಸ್ ಮರಿಕೆ, ಜೆಸಿಐ ಉಪಾಧ್ಯಕ್ಷ ಅನೂಪ್ ಕೆ.ಜೆ. ಉಪಸ್ಥಿತರಿದ್ದರು.