ಪುತ್ತೂರು : ಶಿಕ್ಷಣ ಶಿಲ್ಪಿ ಮೊ| ಪತ್ರಾವೋರವರ ದೂರದರ್ಶಿತ್ವದಿಂದ ಪುತ್ತೂರಿನಲ್ಲಿ ಅಂದು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡು ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ಪರಿಣಮಿಸಿವೆ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ರಂಗದಲ್ಲೂ ಫಿಲೋಮಿನಾದ ವಿದ್ಯಾರ್ಥಿಗಳು ಪ್ರಜ್ವಲಿಸಿರುತ್ತಾರೆ. ಇದೇ ಸಂಪ್ರದಾಯ ಮುಂದಿನ ದಿನಗಳಲ್ಲೂ ಮುಂದುವರಿಯಲಿ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಜಿ ಎಲ್ ಸಮೂಹ ಸಂಸ್ಥೆಗಳ ಚೇರ್ ಮ್ಯಾನ್ ಜಿ ಬಲರಾಮ ಆಚಾರ್ಯ ಹೇಳಿದರು.
ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಜರುಗಿದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಮತ್ತೋರ್ವ ಹಿರಿಯ ವಿದ್ಯಾರ್ಥಿ, ದೇರ್ಲ ಕರುಣಾಕರ ರೈ ಮಾತನಾಡಿ, ಸಂತ ಫಿಲೋಮಿನಾ ವಿದ್ಯಾಸಂಸ್ಥೆ ಶೈಕ್ಷಣಿಕ, ಕ್ರೀಡೆ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಸಾಧಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಈ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯನ್ನು ರೂಪಿಸುತ್ತಾ ಬಂದಿದೆ. ಇದು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ, ಯಾರು ಸಮಾಜದಲ್ಲಿನ ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತಾರೋ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಪ್ರತಿಯೋರ್ವರಲ್ಲೂ ಸಂಸ್ಥೆಯ ಬಗ್ಗೆ ಅಭಿಮಾನವಿರಬೇಕು. ಅದು ಹದೃಯಾಂತರಾಳದಿಂದ ಬರಬೇಕು. ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುವುದು ಹಾಗೂ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿರುವುದು ಒಳ್ಳೆಯ ವಿಚಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ದಿ. ವಂ. ಹೆನ್ರಿ ಕ್ಯಾಸ್ಟಲಿನೊ ದತ್ತಿನಿಧಿ ಬಹುಮಾನಗಳನ್ನು ನೀಡಲಾಯಿತು. ದತ್ತಿನಿಧಿಯ ವಿವರಗಳನ್ನು ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಅಭಿಷೇಕ್ ಸುವರ್ಣ ನೀಡಿದರು. ಉಪನ್ಯಾಸಕರಾದ ವಾರಿಜಾ ಹಾಗೂ ಸುರಕ್ಷಾ ಪ್ರಾರ್ಥಿಸಿದರು. ಎ ಜಗಜೀವನ್ ದಾಸ್ ರೈ ಸ್ವಾಗತಿಸಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯತೀಂದ್ರನಾಥ ರೈ ವಂದಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ನಿಯೋಜಿತ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ಹಾಗೂ ರಕ್ಷಕ-ಶಿಕ್ಷಕ ಸಂಘದ ಕಾರ್ಯದರ್ಶಿಯಾದ ಪ್ರಶಾಂತ್ ರೈ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಉಪನ್ಯಾಸಕಿ ಶ್ರೀಮಣಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.