155 ವರ್ಷಗಳ ಇತಿಹಾಸ ಹೊಂದಿರುವ ಪುತ್ತೂರು ನಗರದ ಅತೀ ಪ್ರಾಚೀನ ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಮೂಲಭೂತ ಸೌಕರ್ಯ| ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನೂತನ ಕಟ್ಟಡದ ಅವಶ್ಯಕತೆ ಹೊಂದಿರುವ ಶಾಲೆ

ಪುತ್ತೂರು:  ನಗರದಲ್ಲಿ 155 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಎಲ್ಲಾ ವಿಧದಲ್ಲೂ ಅಭಿವೃದ್ಧಿಯಾಗಬೇಕಿದೆ.

ನಗರದ ಬಸ್ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರಿನ ಪ್ರಾಚೀನ ಶಾಲೆಗಳ ಪೈಕಿ ಮೊದಲ ಶಾಲೆಯಾಗಿದೆ.

ಸುಮಾರು 3.5 ಎಕ್ರೆ ಜಾಗದ ಒಂದು ಬದಿಯಲ್ಲಿ ಈ ಶಾಲೆಯಿದ್ದು, ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದೇ ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿದ್ಯಾರ್ಜನೆಗೆ ಹೆಸರುವಾಸಿಯಾಗಿತ್ತು. ಅದೆಷ್ಟೋ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ. ಈಗಲೂ ಈ ಶಾಲೆ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಪ್ರಮುಖ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.































 
 

1869 ರಲ್ಲಿ ಸ್ಥಾಪನೆಯಾದ ಈ ಶಾಲೆ ಈಗಲೂ ಹಂಚಿನ ಛಾವಣಿ ಹೊಂದಿದೆ.  ಗ್ರಾಮೀಣ ಭಾಗದ ಶಾಲೆಯಂತಿರುವ ಈ ಶಾಲೆ ಆರಂಭದಿಂದಲೂ ಹೇಗಿದೆ ಅದೇ ರೀತಿಯಲ್ಲಿದೆ. ಅಲ್ಪ ಸ್ವಲ್ಪ ಅಭಿವೃದ್ಧಿಯನ್ನು ಕಂಡರೆ ಉಳಿದಂತೆ ಹಾಗೆಯೇ ಇದೆ.

ಮೂಲಭೂತ ಸೌಕರ್ಯಗಳಾದ ನೂತನ ಕಟ್ಟಡ ಸಹಿತ ಕೊಠಡಿಗಳ ಸಂಖ್ಯೆ ಜಾಸ್ತಿಯಾಗಬೇಕಾದ್ದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಪ್ರತೀ ತರಗತಿಗೆ ಎರಡೆರಡು ಕೊಠಡಿಗಳಿದ್ದವು. ಪ್ರಸ್ತುತ ಈ ಶಾಲೆಯಲ್ಲಿ 1 ರಿಂದ 7ನೇ ತರಗತಿ ಕಾರ್ಯಾಚರಿಸುತ್ತಿದ್ದು, ಕೇವಲ ಮೂರು ಕೊಠಡಿಗಳಲ್ಲಿ ಮಾತ್ರ ಪಾಠ ಪ್ರವಚನ ನಡೆಯುತ್ತಿದೆ. ಅಂದರೆ ಒಂದು ಕೊಠಡಿಯನ್ನು ಎರಡು ವಿಭಾಗಗಳಾಗಿ ಮಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರಸ್ತುತ 85 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಮುಖ್ಯ ಶಿಕ್ಷಕರು ಸೇರಿ ಇಬ್ಬರು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ ನಾಲ್ಕು ಶೌಚಾಲಯಗಳಿದ್ದು, ಕೇವಲ ಒಂದು ಶೌಚಾಲಯ ಮಾತ್ರ ಬಳಕೆಯಾಗುತ್ತಿದೆ. ಉಳಿದ ಮೂರು ಶೌಚಾಲಯಗಳಿಗೆ ಬೀಗ ಜಡಿಯಲಾಗಿದೆ. ಶಾಲಾ ಗೇಟಿನ ಅವಸ್ಥೆ ನೋಡಿದರೆ ಗೇಟು ಹಾಕಿದರೂ ತಳಭಾಗದಿಂದ ಒಳಬರಬಹುದು. ನೀರಿನ ಪೈಪ್‍ಗಳನ್ನು ಕಿಡಿಗೇಡಿಗಳು ಆಗಾಗ ತುಂಡರಿಸುತ್ತಿರುವುದು ಒಂದು ಕಡೆಯಾದರೆ, ಶಾಲೆಗೆ ಸರಿಯಾದ ಕಂಪೌಂಡ್ ಇಲ್ಲದೆ ರಾತ್ರಿ ಹೊತ್ತು ಕಿಡಿಗೇಡಿಗಳು ಅನ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಎಷ್ಟೋ ಉದಾಹರಣೆಗಳಿವೆ.

ಪ್ರಸ್ತುತ ಸರಕಾರಿ ಶಾಲೆಗಳಲ್ಲಿ ಇರುವಷ್ಟು ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿಲ್ಲ. ನಗರದ ಪ್ರಮುಖ ಭಾಗದಲ್ಲಿರುವ ನೆಲ್ಲಿಕಟ್ಟೆ ಶಾಲೆ ಈಗಲೂ ಗ್ರಾಮೀಣ ಪ್ರದೇಶದ ಶಾಲೆಯಂತಿದೆ. ಪರಿಣಾಮ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಾಸಕರ ಮುತುವರ್ಜಿಯಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಈಗಾಗಲೇ ಶಾಲೆಗೆ ನೂತನ ಕಟ್ಟಡವನ್ನು ಒದಗಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ನೂತನ ಕಟ್ಟಡದ ಜತೆ ಕೊಠಡಿಗಳ ಸಂಖ್ಯೆ ಜಾಸ್ತಿ ಮಾಡಿ, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಮಕ್ಕಳ ಸಂಖ್ಯೆಯನ್ನು ಜಾಸ್ತಿ ಮಾಡಬಹುದು.

–           ಪಿ. ಉಲ್ಲಾಸ ಪೈ, ಹಳೆ ವಿದ್ಯಾರ್ಥಿ, ಪುತ್ತೂರು ವರ್ತಕರ ಸಂಘದ ಕಾರ್ಯದರ್ಶಿ

ಶಾಲಾ ಗೋಡೆ ಮಣ್ಣಿನಿಂದ ನಿರ್ಮಾಣವಾಗಿದ್ದು, ಗಟ್ಟಿಯೇನೋ ಇದೆ. ಆದರೆ ಪ್ರಾಚೀನ ಶಾಲೆಯಾಗಿರುವುದರಿಂದ ಹೊಸ ಕಟ್ಟಡದ ಅವಶ್ಯಕತೆಯಿದೆ. ನಾಲ್ಕು ಶೌಚಾಲಯ ಇದ್ದರೂ ನೀರಿನ ಕೊರತೆಯಿಂದ ಮೂರು ಶೌಚಾಲಯ ಬಳಕೆಗೆ ಇಲ್ಲದಂತಾಗಿದೆ. ಈ ಶಾಲಾ ಆವರಣದಲ್ಲಿ ಬಿ.ಆರ್‍.ಸಿ. ಕೇಂದ್ರ, ಅಂಗನವಾಡಿ, ನಲಿಕಲಿ, ವಿಕಲಚೇತನರ ಶಾಲಾ ಕಟ್ಟಡಗಳೂ ಕಾರ್ಯಾಚರಿಸುತ್ತಿವೆ. ಪರಿಣಾಮ ಹಲವಾರು ವಾಹನಗಳು ಬಂದು ಹೋಗುವುದರಿಂದ ಮಕ್ಕಳಿಗೆ ರಕ್ಷಣೆಗೆ ತೊಡಕಾಗಿದೆ. ಈಗಾಗಲೇ ನಾನು ಮತ್ತು ಇನ್ನೊಬ್ಬರು ಶಿಕ್ಷಕಿ ಬೋಧನೆ ಮಾಡುತ್ತಿದ್ದೇವೆ. ಇಬ್ಬರು ಅತಿಥಿ ಶಿಕ್ಷಕರ ಅವಶ್ಯಕತೆಯಿದೆ.

–           ಯಶೋಧಾ ವೈ, ಮುಖ್ಯ ಶಿಕ್ಷಕರು, ನೆಲ್ಲಿಕಟ್ಟೆ ಮಾದರಿ ಹಿರಿಯ ಪ್ರಾಥಮಿಕ ಶಾಲೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top