ಪುತ್ತೂರು: ಪ್ರಾಥಮಿಕ ಶಾಲಾ ಅಧ್ಯಾಪಕನಾಗಿ ಸ್ವಪ್ರಯತ್ನದಿಂದ ಕಲಿಯುವುದು, ಕಲಿಸುವುದು ಹಾಗೂ ಸಂಘಟಿಸುವ ಪ್ರಯತ್ನವನ್ನು ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮಾಡಿದ್ದರು. ಹಾಗಾಗಿ ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮುದಾಯ ನಾಲ್ಕು ಚಕ್ರವಿದ್ದಂತಿತ್ತು ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಿವೇಕ್ ರೈ ಹೇಳಿದರು.
ಅವರು ಇತ್ತೀಚೆಗೆ ನಿಧನರಾದ ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಶ್ರದ್ಧಾಂಜಲಿ ಸಭೆಯನ್ನು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂಟಪದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಡಾ| ರಾಮಕೃಷ್ಣ ಆಚಾರ್ ತನ್ನ ನಿವೃತ್ತಿಯ ಬಳಿಕವೂ ಅಭ್ಯಾಸ ಮಾಡುತ್ತಾ ಬಂದಿರುವ ಅವರು ಬದುಕಿನಲ್ಲಿ ವಿಶ್ರಾಂತಿಯನ್ನು ಪಡೆದಿಲ್ಲ. ನನ್ನ ಅವಧಿಯ ಬಳಿಕ ಅವರು ಕೂಡಾ ತುಳು ಅಕಾಡೆಮಿಯ ಅಧ್ಯಕ್ಷರಾದರು. ಇದು ನಮ್ಮ ಪರಂಪರೆಯನ್ನು ನೆನಪಿಸುತ್ತದೆ ಎಂದ ಅವರು, 2010ರಲ್ಲಿ ಅನಾರೋಗ್ಯದ ಕಾರಣದಿಂದ ಒಂದು ಕಾಲು ಕಳೆದುಕೊಂಡರೂ 14 ವರ್ಷ ಒಂದೇ ಕಾಲಿನಲ್ಲಿ ನಿಂತು ಕೆಲಸ ಮಾಡುತ್ತಾ ಬಂದರು. ಅವರ ಮಹತ್ವದ ಕೃತಿಗಳು ಬಂದದ್ದೇ 2010ರ ಬಳಿಕ. 1975, 76ನೇ ಕಾಲಕ್ಕೆ ಬಂದ ತುಳು ಜಾನಪದ ಕಥೆಗಳ ಕನ್ನಡ ಅನುವಾದಕ್ಕೆ ನಾನೇ ಮುನ್ನುಡಿ ಬರೆದಿದ್ದೆ. ಅವರ 1837ರ ತುಳುವರ ರೈತ ಹೋರಾಟ ಕನ್ನಡದಲ್ಲಿ ಮೊದಲು ಬಂತು. ಬಳಿಕ ಅದು ಬೇರೆ ಭಾಷೆಗೂ ತರ್ಜುಮೆಯಾಯಿತು. ಹೀಗೆ 14 ವರ್ಷಗಳ ಕಾಲ ಅವರ ಸ್ಥಿತಿಯಲ್ಲಿದ್ದವರು ಬೇರೆ ಯಾರೇ ಆದರೂ ಹಾಸಿಗೆಯಿಂದ ಏಳುತ್ತಿರಲಿಲ್ಲ. ಆದರೆ ಪಾಲ್ತಾಡಿಯವರಿಂದ 15ಕ್ಕೂ ಹೆಚ್ಚು ಪುಸ್ತಕ ಪ್ರಕಟವಾದದ್ದು 2010ರ ಬಳಿಕ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿ ಡಾ| ಚಿನ್ನಪ್ಪ ಗೌಡ ಮಾತನಾಡಿ, ಪಾಲ್ತಾಡಿ ಅವರ ಮನೆ ಮತ್ತು ಅಭಿನಂದನಾ ಗ್ರಂಥದ ಹೆಸರು ನೆಲೆ. ಅವರು ಬೆಳೆದದ್ದು ತುಳುವ ಶೈಕ್ಷಣಿಕ ಹಿನ್ನೆಲೆಯಲ್ಲಿ. ಪಾಲ್ತಾಡಿಯವರು ನನಗಿಂತ 10 ವರ್ಷ ದೊಡ್ಡವರು. ನಾನು ಭೂತಾರಾಧನೆಯಲ್ಲಿ ಪಿಎಚ್ ಡಿ ಮಾಡುವಾಗ ಅನೇಕ ವಿಚಾರಗಳನ್ನು ಅವರು ನನಗೆ ಸಂಗ್ರಹಿಸಿಕೊಟ್ಟಿದ್ದಾರೆ. ಅವರು ಕೆಲಸಮಾಡುವ ಕಾಲಕ್ಕೆ ತುಳುವಿನ ಅಧ್ಯಯನ ಸಂಶೋಧನೆಯ ಪ್ರಾರಂಭದ ಕಾಲಘಟ್ಟವಾಗಿತ್ತು. ಹಾಗಾಗಿ ಅಧ್ಯಯನ ಮಾಡುವವರಿಗೆ ಪಾಲ್ತಾಡಿಯವರು ಒಂದು ಉತ್ತಮ ತಳಹದಿ ಹಾಕಿಕೊಟ್ಟಿದ್ದಾರೆ. ಮುಂದಿನ 50 ವರ್ಷದ ಬಳಿಕವೂ ಪಾಲ್ತಾಡಿಯವರ ಗ್ರಂಥಗಳ, ಮಾಹಿತಿಗಳ ತೂಕ ಕಡಿಮೆ ಆಗುವುದಿಲ್ಲ. ಅವರ ಕೃತಿಗಳು ಬಹಳ ಮುಖ್ಯವಾಗಿವೆ. ಅಂತಹ ಮಾಹಿತಿ ಅವರ ಗ್ರಂಥಗಳಲ್ಲಿದೆ. ಅಕಾಡೆಮಿ ಇರುವುದು ಪ್ರಶಸ್ತಿಗಳನ್ನು ಹಂಚುವುದಕ್ಕಲ್ಲ. ಪ್ರಶಸ್ತಿ ಪಡೆಯಲು ಅರ್ಹರಾದವರನ್ನು ಸೃಷ್ಟಿ ಮಾಡಲು ಎಂಬುದನ್ನು ಪಾಲ್ತಾಡಿ ರಾಮಕೃಷ್ಣ ಆಚಾರ್ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸಾಹಿತಿ, ಉಪನ್ಯಾಸಕ ನರೇಂದ್ರ ರೈ ದೇರ್ಲ ಅವರು ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಕುರಿತು ಬರೆದ ವಿಚಾರಧಾರೆ ಪುಸ್ತಕವನ್ನು ಪರಿಚಯಿಸಿದರು. ಸಭೆಗೆ ಆಗಮಿಸಿದವರಿಗೆ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಕುಟುಂಬದವರು ಪುಸ್ತಕ ವಿತರಿಸಿದರು.
ಪಾಲ್ತಾಡಿಯವರು ರಚಿಸಿದ ಜಾನಪದ ಗೀತೆ ಗಾಯನ: ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ರಚಿಸಿದ ಹಲವು ತುಳು ಜಾನಪದ ಗೀತೆಯನ್ನು ಶ್ರದ್ದಾಂಜಲಿ ಸಭೆಯಲ್ಲಿ ಹಾಡಲಾಯಿತು. ಕೆ ಆರ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ರತ್ನಾವತಿ, ಅಕ್ಷತಾ ಅವರು ಕೂಡಾ ಹಾಡಿದರು. ತಬಲದಲ್ಲಿ ಸುದನ್ವ, ಹಾರ್ಮೋನಿಯಂನಲ್ಲಿ ಶರತ್ ಸಹಕರಿಸಿದರು. ಪಾಲ್ತಾಡಿ ಅವರ ಸಹೋದರರಾದ ಭಾಸ್ಕರ್ ಆಚಾರ್. ರಂಗನಾಥ್ ಆಚಾರ್ ಕಲಾವಿದರನ್ನು ಗೌರವಿಸಿದರು. ಸಭೆಗೆ ಆಗಮಿಸಿದವರಿಗೆ ಡಾ। ಪಾಲ್ತಾಡಿಯವರ ಕೃತಿಯನ್ನು ವಿತರಿಸಲಾಯಿತು. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಪತ್ನಿ ಸುಮಾಆರ್.ಆಚಾರ್, ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸ್ಸರ್ ಆಗಿರುವ ಪುತ್ರ ಹರ್ಷವರ್ಧನ, ಪುತ್ರಿಯರಾದ ಕಿರಣ ಪಿ.ಆರ್., ಬೆಳ್ಳಾರೆ ಡಾ|ಶಿವರಾಮ ಕಾರಂತ ಪ.ಪೂ.ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸುಪ್ರಿಯಾ ಪಿ.ಆರ್, ಸೊಸೆ ಸುಧಾ, ಅಳಿಯಂದಿರಾದ ಕೃಷ್ಣ ಎಂ.ಬಿ., ಜಯಪಾಲ ಹೆಚ್.ಎನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತಿಗಳು, ಹಿತೈಷಿಗಳು, ಪಾಲ್ತಾಡಿ ಅವರ – ಬಂಧುಗಳು ಪಾಲ್ತಾಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.