ಕೆಲವೇ ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಅವರು ರಸ್ತೆ ಅಪಘಾತದಲ್ಲಿ ನಿಧನರಾದ ಬೆನ್ನಲ್ಲೇ ಪವಿತ್ರಾ ಜಯರಾಮ್ ಜೊತೆ ಸ್ನೇಹ ಹೊಂದಿದ್ದ ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪವಿತ್ರಾ ಜಯರಾಮ್ ಜೊತೆ ಚಂದು ಆಪ್ತವಾಗಿದ್ದರು. ಪವಿತ್ರಾ ನಿಧನದ ಬಳಿಕ ತೀವ್ರ ದುಃಖಕ್ಕೆ ಒಳಗಾಗಿದ್ದ ಚಂದು ಅವರು ಹೈದರಾಬಾದ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹೈದರಾಬಾದ್ ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಐದು ದಿನಗಳ ಹಿಂದಷ್ಟೇ ಮೆಹಬೂಬ್ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದರು. ಬೆಂಗಳೂರಿನಿಂದ ಹೈದರಾಬಾದ್ ಗೆ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಪವಿತ್ರಾ ಸಾವಿಗೀಡಾಗಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಂದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪವಿತ್ರಾ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಚಂದು ಅವರು ಮಂಡ್ಯಕ್ಕೆ ಬಂದಿದ್ದರು. ತೀವ್ರ ಭಾವುಕವಾಗಿ ಅವರು ಮಾತನಾಡಿದ್ದರು.
2015ರಲ್ಲಿ ಶಿಲ್ಪಾಳನ್ನು ಪ್ರೀತಿಸಿ ಚಂದು ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಟಿ ಪವಿತ್ರಾ ಜಯರಾಮ್ ಅವರ ಸಾವಿನಿಂದ ಮನನೊಂದು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ನ ನಾರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.