ಬೆಂಗಳೂರು: ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ರಾಜ್ಯ ಸರಕಾರಕ್ಕೆ ಸವಾಲಾಗಿದೆ. ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ಭಾರೀ ಕಸರತ್ತು ನಡೆಸುತ್ತಿರುವ ಸರ್ಕಾರ, ಮತ್ತೆ ದೇಶೀಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾಗಿದೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್ಪ್ಯಾಬ್‌ಗಳ ಅಗ್ಗದ ಮದ್ಯಗಳ ಬೆಲೆ ತುಂಬಾ ಕಡಿಮೆಯಿದೆ. ರಾಜ್ಯದಲ್ಲಿ ಸೆಮಿ ಪ್ರೀಮಿಯಂ ಹಾಗೂ ಪ್ರೀಮಿಯಂ ವಿದೇಶಿ ಮದ್ಯಕ್ಕೆ ಹೋಲಿಸಿದರೆ ಅಗ್ಗದ ಬೆಲೆಯ ಮದ್ಯಗಳ ಮಾರಾಟ ಹೆಚ್ಚಿದೆ. ಹೀಗಾಗಿ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ.
ಅಬಕಾರಿ ಇಲಾಖೆಯಿಂದ ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವ ಆದಾಯದಲ್ಲೂ ಅಗ್ಗದ ಮದ್ಯಗಳು ಸಿಂಹಪಾಲು ಹೊಂದಿವೆ. ಈಗ ರಾಜ್ಯದಲ್ಲಿ 2023ರ ಜುಲೈನಲ್ಲಿ ದೇಶೀಯ ಮದ್ಯಗಳ ಬೆಲೆ ಹೆಚ್ಚಿಸಲಾಗಿತ್ತು. ನಂತರ ಲಿಕ್ಕರ್ ಕಂಪನಿಗಳು ಬಿಯರ್ ದರ ಏರಿಕೆ ಮಾಡಿದವು. ನಂತರ ಜನಸಾಮಾನ್ಯರು ಬಳಸುವ ಲಿಕ್ಕರ್ ದರವನ್ನು 20 ರೂಪಾಯಿಗೆ ಏರಿಕೆ ಮಾಡಿತ್ತು. ಈಗ ಮತ್ತೆ ಲಿಕ್ಕರ್ ದರ ಏರಿಕೆಗೆ ಅಬಕಾರಿ ಇಲಾಖೆ ನಿರ್ಧರಿಸಿದ್ದು, ಸರ್ಕಾರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಅನುಮೋದನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಹೊರ ರಾಜ್ಯಗಳಲ್ಲಿ ದುಬಾರಿ ಮದ್ಯಗಳ ಬೆಲೆ ಕರ್ನಾಟಕಕ್ಕಿಂತಲೂ ಕಡಿಮೆ ಇದೆ. ಈ ಮದ್ಯಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಇವುಗಳ ಬೆಲೆ ಇಳಿಕೆ ಮಾಡಲಿದೆ. 6-12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿ ಶೇ10ರಷ್ಟು, 12-18ನೇ ಸ್ಪ್ಯಾಬ್‌ವರೆಗಿನ ವಿದೇಶಿ ಅಥವಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಶೇ12-15ರಷ್ಟು ಇಳಿಕೆ ಮಾಡುವ ಸಾಧ್ಯತೆಯಿದೆ.
ವಿಧಾನಸಭಾ ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಬಿಯರ್ ದರ ಹೆಚ್ಚಳ ಮಾಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಿಯರ್ ಮೇಲೆ ಶೇ20 ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್ ಉತ್ಪಾದನಾ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ. ವರೆಗೆ ದರ ಹೆಚ್ಚಿಸಿದ್ದವು. ಇದರ ಬೆನ್ನಲ್ಲೇ ಸರಕಾರ ಫೆ.1ರಿಂದ ಜಾರಿಗೆ ಬರುವಂತೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ 185 ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಅಲ್ಲದೆ, ಎಇಡಿ ಶೇ 10ರಷ್ಟು ಹೆಚ್ಚಳವಾಗಿತ್ತು.