ಪುತ್ತೂರು: ಇಂದು ಇಡೀ ವಿಶ್ವದಲ್ಲಿಯೇ ಭಾರತ ಅದ್ಭುತ ಸ್ಥಾನಕ್ಕೆ ಏರುತಿದೆ. ಹೀಗಿರುವಾಗ ಮಾಧ್ಯಮಗಳಿಗೆ ದೇಶದಲ್ಲಿ ಕಂಡುಬರುವ ಎಲ್ಲಾ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಪತ್ರಕರ್ತರು ಯಾರ ಪರವಾಗಿಯೂ ನಿಲ್ಲದೆ, ಸತ್ಯದ ಪರ, ರಾಷ್ಟ್ರದ ಪರ ನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿ ಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿಯ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ರಾಷ್ಟ್ರಮಟ್ಟದ ಫೆಸ್ಟ್ ’ವಿವೇಕ ಚೇತನ-2024’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಟ, ಹಿನ್ನೆಲೆ ಧ್ವನಿ ಕಲಾವಿದ ಬಡೆಕ್ಕಿಲ ಪ್ರದೀಪ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸತನವನ್ನು ಹುಡುಕಿಕೊಂಡು, ಮೈಗೂಡಿಸಿಕೊಂಡು ಬಾಳುವುದು ಬಹಳ ಮುಖ್ಯ. ಹೊಸ ಅಲೆಯೊಂದಿಗೆ ಹಳೆಯ ವಿಚಾರಗಳನ್ನು ಜೋಡಿಸಿಕೊಂಡು ಅದಕ್ಕೆ ನಾವು ಹೇಗೆ ಹೊಂದಿಕೊಳ್ಳುತ್ತೇವೆ ಎನ್ನುವುದು ಮಹತ್ತರವಾದ ಸಂಗತಿ. ಬದುಕಿನಲ್ಲಿ ಕಹಿಯ ಸಂಗತಿಗಳು ಉಂಟಾದಾಗ ನಾವು ಕುಗ್ಗಿ ಹೋಗದೆ, ಅದನ್ನು ಧೈರ್ಯದಿಂದ ಎದುರಿಸಿ ಮುಂದುವರಿಯಬೇಕು ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್., ಕಾಲೇಜಿನ ವಿಶೇಷ ಅಧಿಕಾರಿ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್, ಪಿಜಿ., ವಿಭಾಗದ ಡೀನ್ ಡಾ.ವಿಜಯ ಸರಸ್ವತಿ, ಉಪನ್ಯಾಸಕಿ ಶ್ರೀಪ್ರಿಯಾ ಉಪಸ್ಥಿತರಿದ್ದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ ಆರ್ ನಿಡ್ಪಳ್ಳಿ ಸ್ವಾಗತಿಸಿ, ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಶರತ್ ಕೆ.ಎನ್. ವಂದಿಸಿ, ಹರಿಪ್ರಸಾದ್ ಈಶ್ವರಮಂಗಲ, ಚೈತ್ರಾ ಭಟ್ ನಿರ್ವಹಿಸಿದರು
ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಆರ್‌ಜೆ ಕಾಜಲ್ ಮಾತನಾಡಿ. ನಮ್ಮ ಬಾಳಿನಲ್ಲಿ ನೋವುಂಟು ಮಾಡುವವರು ಹಲವರಿದ್ದಾರೆ. ಆದರೆ ಅದಕ್ಕೆ ಧೃತಿಗೆಡದೆ ನಮ್ಮ ಬದುಕಿನಲ್ಲಿ ಬರುವ ಸವಾಲನ್ನು ಸ್ವೀಕರಿಸಿ ಮುಂದುವರೆಯಬೇಕು ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ವಿಶ್ವಗುರುವಾಗುತ್ತ ಹೆಜ್ಜೆ ಇಟ್ಟಿದೆ. ಈ ಸಂದರ್ಭದಲ್ಲಿ ಪತ್ರಕರ್ತರು ಅತ್ಯಂತ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ. ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ಸಂಹಿತೆಗಳನ್ನು ಚೆನ್ನಾಗಿ ಅರಿತುಕೊಂಡು ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಡಬೇಕು ಎಂದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಾಶ್ರೀ ಪಾಲ್ತಾಡಿ ಸ್ವಾಗತಿಸಿ, ಉಪನ್ಯಾಸಕರಾದ ಸುತನ್ ಕೇವಳ ವಂದಿಸಿ, ಅಕ್ಷಯ್ ರೈ ಸಹಕರಿಸಿದರು.
ವಿವೇಕ ಚೇತನ -2024 ಸ್ಪರ್ಧೆಯ ಸಮಗ್ರ ತಂಡ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು, ದ್ವಿತೀಯ ರನ್ನರ್ ಪ್ರಶಸ್ತಿಯನ್ನು ಎಸ್‌ಡಿಎಂ ಕಾಲೇಜು ಪಡೆದುಕೊಂಡಿತು.