ಪುತ್ತೂರು: ಪುತ್ತೂರು ನಗರದಲ್ಲಿ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಲ್ಲೂ ದ್ವಿಚಕ್ರ ವಾಹನ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಪರಿಣಾಮ ನಗರದಲ್ಲಿ ಪಾರ್ಕ್ ಮಾಡಲು ವಾಹನ ಸವಾರರು ಹಿಂದೆ-ಮುಂದೆ ನೋಡುವಂತಾಗಿದೆ.
ನಗರದಲ್ಲಿ ಅಂಗಡಿ ಮುಂಗಟ್ಟು, ರೈಲ್ವೇ ನಿಲ್ದಾಣ ಹೀಗೆ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಕಾರ್ಯಾಚರಿಸುತ್ತಿದ್ದರೂ ಕ್ಯಾಮರಾ ಕಣ್ತಪ್ಪಿಸಿ ಕಳವು ಮಾಡುವ ಚಾಣಕ್ಯವನ್ನು ಕಳ್ಳರು ಹೊಂದಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಮತ್ತಷ್ಟು ಸಿಸಿ ಕ್ಯಾಮರಾ ಅಳವಡಿಸುವಂತೆ ಸಾರ್ವಜನಿಕರು ಮಾಹಿತಿ ಮನವಿ ಮಾಡಿದರೂ ಸಿಸಿ ಟಿವಿ ಅಳವಡಿಸದೇ ಇರುವುದರಿಂದ ವಾಹನ ಕಳ್ಳರಿಗೆ ಮತ್ತಷ್ಟು ಅನುಕೂಲವಾದಂತೆ ತೋರುತ್ತಿದೆ.
ರೈಲ್ವೇ ನಿಲ್ದಾಣದ ಬಳಿ ಬುಧವಾರ ಬೈಕೊಂದು ಕಳವಾಗಿದ್ದು, ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸು ದಾಖಲಿಸಿಯೇನೋ ಆಯಿತು. ಆದರೆ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗುತ್ತಿರುವುದು ಸಾರ್ಜನಿಕರ ಕಂಗೆಣ್ಣಿಗೆ ಗುರಿಯಾಗುವಂತಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು. ಈ ನಿಟ್ಟಿನಲ್ಲಿ ವಾಹನ ಸವಾರರು ಜಾಗ್ರತೆ ಜತೆಗೆ ಪೊಲೀಸ್ ಇಲಾಖೆ ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.