ಪುತ್ತೂರು: ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಆರಿಗ (78) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲ್ಯಾಡಿ ಸಮೀಪದ ಇಚ್ಲಂಪಾಡಿ ಗ್ರಾಮದ ಬೀಡುಬೈಲು ನಿವಾಸಿಯಾಗಿರುವ ನಾಗರಾಜ ಆರಿಗ ಬೀಡುಬೈಲು ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದ್ದರು. ಅವರ ಮನೆ ಕೆಲಸದವರಾದ ಸುಧಾಕರ ಅವರು ಮಂಗಳವಾರ ಹಗಲು ಕೆಲಸಕ್ಕೆ ಬಂದಿರಲಿಲ್ಲ. ಅದೇ ದಿನ ರಾತ್ರಿ 8.45 ಗಂಟೆಗೆ ಮನೆಗೆ ಮಲಗಲೆಂದು ಬಂದಾಗ ಮನೆಯಲ್ಲಿ ಲೈಟ್ ಉರಿಯದಿರುವುದನ್ನು ಕಂಡು ಮನೆಯ ಬಳಿ ಹೋಗಿ ನಾಗರಾಜ ಆರಿಗ ಅವರನ್ನು ಜೋರಾಗಿ ಕರೆದಾಗ ಮಾತನಾಡದೇ ಇದ್ದು ಸುತ್ತಮುತ್ತ ಹುಡುಕಾಡಿದಾಗ ರಾತ್ರಿ 9.45ರ ವೇಳೆಗೆ ಮನೆಯ ಸಮೀಪದಲ್ಲಿದ್ದ ಹುಣಸೆ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಬಿಗಿದುಕೊಂಡು ನೇತಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಸುಧಾಕರ ಅವರು ನಾಗರಾಜ ಆರಿಗ ಅವರ ಪುತ್ರಿ ರಶ್ಮಿ ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದರು. ಅವರು ಬುಧವಾರ ಬೆಳಿಗ್ಗೆ 5 ಗಂಟೆಗೆ ಬೀಡುಬೈಲು ಮನೆಗೆ ಬಂದಾಗ ನಾಗರಾಜ ಆರಿಗ ಮೃತಪಟ್ಟಿದ್ದರು.
ಮೃತರ ಪುತ್ರಿ ಶಿಲ್ಪಾ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ ಆರಿಗ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಲ್ಲಿ ಮೇಲ್ವಿಚಾರಕರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ, ಧರ್ಮಸ್ಥಳ ಮೇಳದಲ್ಲಿ ಹಲವು ವರ್ಷಗಳ ಕಾಲ ಚೆಂಡೆಗಾರರಾಗಿ ಕೆಲಸ ಮಾಡಿದ್ದು, ಚೆಂಡೆ ನಾಗರಾಜ ಎಂದೇ ಕರೆಸಿಕೊಂಡಿದ್ದರು.
ಮೃತರ ಪತ್ನಿ ಕುಶಾಲ ಎನ್.ಆರಿಗ ಅವರು ಎರಡು ವರ್ಷದ ಹಿಂದೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಮೃತರು ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.