ಪುತ್ತೂರು : ಕಲೆ, ವಾಣಿಜ್ಯ, ವಿಜ್ಞಾನ ಸಹಿತ ಹಲವು ಕೋರ್ಸ್ಗಳಿಗೂ ಅತ್ಯುತ್ತಮ ಉದ್ಯೋಗಾವಕಾಶಗಳಿವೆ. ಆದರೆ ಆ ಅವಕಾಶಗಳು ಎಲ್ಲಿವೆ ಮತ್ತು ಹೇಗಿವೆ ಎಂಬುದನ್ನು ವಿದ್ಯಾರ್ಥಿಗಳು ಸಾಕಷ್ಟು ಪೂರ್ವದಲ್ಲಿಯೇ ತಿಳಿದುಕೊಳ್ಳಬೇಕು. ಮಾತ್ರವಲ್ಲದೆ ಆ ಉದ್ಯೋಗಕ್ಕೆ ಭೇಕಾದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಡಾ.ಶ್ರೀಶ ಭಟ್ ಹೇಳಿದರು.
ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಒಂದು ವಾರದ ಸ್ಕಿಲ್ ಎಡ್ಜ್ ಅನ್ನುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗಗಳಿಗೆ ಹೇಗೆ ತಯಾರಾಗಬೇಕು ಎಂಬುದನ್ನು ಮೊದಲೇ ಅರಿತು ಸಿದ್ಧರಾಗಬೇಕು. ಕೌಶಲ್ಯವಿರದ ಯಾರೂ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯವಿಲ್ಲ. ಆದರೆ ತೊಂಬತ್ತೈದು ಶೇಕಡಾಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿ ಹಂತದಲ್ಲೂ ಸ್ಪಷ್ಟ ಗುರಿಯನ್ನೇ ನಿರ್ಧರಿಸಿರುವುದಿಲ್ಲ. ಹೀಗಾಗಿ ಔದ್ಯೋಗಿಕ ಜಗತ್ತಿಗೆ ಅಡಿಯಿಡುವಾಗ ಎಡವಿ ಬೀಳುತ್ತಿದ್ದಾರೆ ಎಂದರು.
ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ, ವಿವಿಧ ಕಾರ್ಯಾಗಾರಗಳಲ್ಲಿ ಭಾಗಿಯಾಗುವುದರಿಂದ ನಮ್ಮೊಳಗಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆಯಾ ಕ್ಷೇತ್ರದಲ್ಲಿ ತಜ್ಞರಾದವರೇ ಬಂದು ಒದಗಿಸಿಕೊಡುವ ಮಾಹಿತಿ ನಮ್ಮ ಮುಂದಿನ ಬದುಕಿಗೆ ದೀವಿಗೆಯೆನಿಸುತ್ತದೆ ಎಂದರು.
ವೇದಿಕೆಯಲ್ಲಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಗಣೇಶ ಪ್ರಸಾದ್ ಎ., ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಮಾನ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ದೀಪ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.