ಪುತ್ತೂರು: ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ ಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ. ಎನ್.ಎಸ್.ಎಸ್ ಶಿಬಿರದಿಂದ ಬದುಕಿಗೆ ಪೂರಕವಾದ ಶಿಕ್ಷಣವನ್ನು ಪಡೆಯಬಹುದು ಎಂದು ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ. ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಹನುಮಗಿರಿ ಶ್ರೀ ಗಜಾನನ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ನಡೆದ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತ್ವದ ಅಭಿವೃದ್ಧಿಯತ್ತ ನಮ್ಮ ಚಿತ್ತ ಎಂಬ ಘೋಷಣೆಯೊಂದಿಗೆ ನಡೆದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ ಕೆ. ಎನ್. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ದೇಶದ ಅತ್ಯಂತ ದೊಡ್ಡ ಸೇವಾಸಂಸ್ಥೆ. ಸೇವೆ ಎಂಬುದು ನಮ್ಮ ಬದುಕಿನ ಅಂಗವಾಗಬೇಕು. ನಮ್ಮ ನಿತ್ಯಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಬದ್ಧತೆ ಎಂಬುದಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ. ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆಯೆಂಬ ಯಜ್ಞದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಏನೇ ಎದುರಾದರೂ ಧೈರ್ಯದಿಂದ ಎದುರಿಸುತ್ತೇನೆಂಬ ಮನೋಧೈರ್ಯ ನಮ್ಮಲ್ಲಿ ಮೂಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಬಿರವು ಸಹಕಾರಿಯಾಗಲಿ ಎಂದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಅನಂತಕೃಷ್ಣ ನಾಯಕ್, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕರಾದ ಮಾನಸ ಎ., ವಿಘ್ನೇಶ್ವರ ಶಾಸ್ತ್ರಿ, ವರ್ಷಿತ್, ಮೈತ್ರಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಡಾ. ಅರುಣ್ ಪ್ರಕಾಶ್ ಸ್ವಾಗತಿಸಿ, ಶಿಬಿರಾರ್ಥಿ ಪ್ರಣಮ್ಯ ಯು. ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿದ್ಯಾ ಕೆ. ಎನ್. ವಂದಿಸಿದರು.