ಹೊಸದಿಲ್ಲಿ: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಆರಂಭಗೊಂಡಿದೆ.
ತೆಲಂಗಾಣದ ಎಲ್ಲ 17 ಸ್ಥಾನಗಳು ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ಆರಂಭಗೊಂಡಿದ್ದು, ಆಂಧ್ರಪ್ರದೇಶದಲ್ಲಿ ಎಲ್ಲ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ಸಹ ಮತದಾನ ಆರಂಭವಾಗಿದೆ.
82 ದಿನಗಳ ಸುದೀರ್ಘ, ಏಳು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 96 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಮೊದಲ ಮೂರು ಹಂತಗಳಲ್ಲಿ ಕ್ರಮವಾಗಿ ಶೇ 66.1, ಶೇ 66.7 ಮತ್ತು ಶೇ.61 ರಷ್ಟು ಮತದಾನ ದಾಖಲಾಗಿದೆ.
ನಾಲ್ಕನೇ ಹಂತದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಟಿಎಂಸಿಯ ಮಹುವಾ ಮೊಯಿತ್ರಾ, ಶತ್ರುಘ್ನ ಸಿನ್ಹಾ ಮತ್ತು ಯೂಸುಫ್ ಪಠಾಣ್ ಮತ್ತು ಕಾಂಗ್ರೆಸ್ ನ ಅಧೀರ್ ರಂಜನ್ ಚೌಧರಿ ಮತ್ತು ವೈಎಸ್ ಶರ್ಮಿಳಾ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಬಿಜೆಪಿಯ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಅರ್ಜುನ್ ಮುಂಡಾ, ಅಜಯ್ ಮಿಶ್ರಾ ತೇನಿ, ಗಿರಿರಾಜ್ ಸಿಂಗ್ ಮತ್ತು ನಿತ್ಯಾನಂದ್ ರೈ ಸೇರಿದಂತೆ ಪಕ್ಷದ ನಾಯಕರಾದ ಸಾಕ್ಷಿ ಮಹಾರಾಜ್, ದಿಲೀಪ್ ಘೋಷ್, ಪಂಕಜಾ ಮುಂಡೆ, ಬಂಡಿ ಸಂಜಯ್, ಮಾಧವಿ ಲತಾ ಮತ್ತು ದಗ್ಗುಬಾಟಿ ಪುರಂದೇಶ್ವರಿ ಸೇರಿದಂತೆ ದೊಡ್ಡ ಹೆಸರುಗಳಿವೆ.