ಪುತ್ತೂರು: ಯುವಕನೋರ್ವ ನಿಲ್ಲಿಸಿದ್ದ ಓಮ್ನಿ ಕಾರೊಂದನ್ನು ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಸಂಪ್ಯದಲ್ಲಿ ನಡೆದಿದೆ.
ಕುಂಬ್ರ ಸೇತುವೆಯ ಬಳಿ ವಾಹನ ಚಾಲಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆಯೂ ನಡೆಯಿತು..
ಬುದ್ದಿಮಾಂದ್ಯ ಯುವಕ ಕೈಯ್ಯಲ್ಲಿ ಕೋಲೊಂದನ್ನು ಹಿಡಿದು ಮಧ್ಯಾಹ್ನದ ವೇಳೆ ಸಂಪ್ಯದಲ್ಲಿ ರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ. ಸಂಜೆ ವೇಳೆ ಈತ ಯಾರೋ ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮ ನಾಲ್ಕೈದು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಕೊನೆಗೂ ಆತನನ್ನು ಅಟ್ಟಾಡಿಸಿಕೊಂಡು ಬಂದ ವಾಹನ ಚಾಲಕರು ಕುಂಬ್ರ ಸೇತುವೆಯ ಬಳಿ ಆತ ಚಲಾಯಿಸುತ್ತಿದ್ದ ಓಮ್ನಿಯನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದಿಂದ ವಾಹನಗಳು ಜಖಂಗೊಂಡಿದೆ.
ಈತ ಚಲಾಯಿಸಿಕೊಂಡು ಬಂದ ಕಾರಿನಲ್ಲಿ ಕೋವಿ ಇತ್ತೆನ್ನಲಾಗಿದ್ದು, ಅದನ್ನು ಹಿಡಿದು ಆತ ಬೆದರಿಸಿದ್ದ. ಗಾಂಜಾ ವ್ಯಸನಿಯಂತೆ ಕಾಣುತ್ತಿದ್ದ ಈತ ಎಲ್ಲಿಯವರು ಎಂಬುದು ಗೊತ್ತಾಗಿಲ್ಲ. ಹಿಂದಿ ಮತ್ತು ಕೇರಳ ಮಲೆಯಾಳಂ ಭಾಷೆ ಮಾತನಾಡುವ ಈತನ ರಾದ್ಧಾಂತಕ್ಕೆ ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಕುಂಬ್ರದಿಂದ ಈತನನ್ನು ವಶಕ್ಕೆ ಪಡೆದು ಬಳಿಕ ಸಂಟ್ಯಾರ್‌ನಲ್ಲಿ ಬಿಟ್ಟು ಹೋಗಿದ್ದಾರೆ. ಘಟನೆಯ ಸುದ್ದಿ ತಿಳಿದು ಸ್ಥಳದಲ್ಲಿ ನೂರಾರು ಮಂದಿ ನೆರೆದಿದ್ದು, ಮಾತ್ರವಲ್ಲದೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಕ್ಕಾಲು ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. ಗ್ರಾಮಾಂತರ ಠಾಣಾ ಪೊಲೀಸರು ಸಂಚಾರ ಸುಗಮಗೊಳಿಸಿ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಓಮ್ನಿ ಕಾರು ಗೋವರ್ಧನ ಹೆಗ್ಡೆ ಎಂಬವರಿಗೆ ಸೇರಿದ್ದಾಗಿದೆ, ಆರೋಪಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.