ಶಂಕರ ಭಗವತ್ಪಾದರ ವಿಚಾರಗಳಿಂದ ನಮ್ಮ ಬದುಕು ಔನ್ನತ್ಯಕ್ಕೆ : ಅಂಬಿಕಾ ಕ್ಯಾಂಪಸ್‌ನಲ್ಲಿ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ವಿದ್ವಾನ್ ಕೃಷ್ಣರಾಜ ಭಟ್

ಪುತ್ತೂರು: ಜಗದ್ಗುರು ಶಂಕರಾಚಾರ್ಯರ ವ್ಯಕ್ತಿತ್ವವನ್ನು ಮಾತಿನಲ್ಲಿ ಕಟ್ಟಿಕೊಡುವ ಶಕ್ತಿ ಸಾಮಾನ್ಯ ಮನುಷ್ಯರಲ್ಲಿಲ್ಲ. ಆದರೆ ಅವರ ಬಗೆಗೆ ತಿಳಿದುಕೊಂಡ ಅಲ್ಪಾತಿ ಅಲ್ಪ ವಿಚಾರಗಳನ್ನಾದರೂ ಮತ್ತೆ ಮತ್ತೆ ಪ್ರಸಾರ ಮಾಡುತ್ತಿದ್ದರೆ ನಮ್ಮ ವ್ಯಕ್ತಿತ್ವದಲ್ಲಿನ ದೋಷಗಳು ನಿವಾರಣೆಯಾಗುವಲ್ಲಿ ಸಹಕಾರಿಯಾಗುತ್ತದೆ. ಒಳ್ಳೆಯ ವಿಚಾರಗಳ ಅಧ್ಯಯನ, ಪ್ರಸರಣ ನಮ್ಮ ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಶೃಂಗೇರಿಯ ಶ್ರೀ ಸದ್ವಿದ್ಯಾ ಸಂಜೀವಿನೀ ಸಂಸ್ಕೃತ ಪಾಠಶಾಲೆಯ ವ್ಯಾಕರಣ ಶಾಸ್ತ್ರ ವಿದ್ವಾಂಸ ವಿದ್ವಾನ್ ಕೃಷ್ಣರಾಜ ಭಟ್ಟ ಹೇಳಿದರು.

ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಕ್ಯಾಂಪಸ್‌ನ ಶ್ರೀ ಶಂಕರ ಸಭಾಭವನದಲ್ಲಿ ಭಾನುವಾರ ಶ್ರೀ ಗುರುವಂದನಾ ಸಮಿತಿ, ಮಿತ್ರ ಸಮಾಜ, ಶಂಕರ ಪ್ರತಿಷ್ಠಾನ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶಂಕರ ಭಗವತ್ಪಾದರ ಜೀವನದ ಹಾದಿ ನಮ್ಮೆಲ್ಲರಿಗೂ ಒಂದು ಆದರ್ಶ. ಅಹಂಕಾರ ರಹಿತ ಜೀವನವನ್ನು ನಮ್ಮದಾಗಿಸುವುದಕ್ಕೆ ಶಂಕರರ ಸ್ಮರಣೆ ಅಗತ್ಯ. ಇಂದಿಗೆ ಸಾವಿರಾರು ವರ್ಷಗಳ ಮೊದಲೇ ಸಾರ್ವಕಾಲಿಕ ಸತ್ಯದ ಬೋಧನೆ ಮಾಡಿರುವ ಮಹಾಮಹಿಮ ಶಂಕರಾಚಾರ್ಯರು. ಅವರು ನಮ್ಮೆಲ್ಲರ ಕಲ್ಪನೆಗೂ ಮೀರಿದ ಶಕ್ತಿ ಎಂದರು.



































 
 

ಕಾರ್ಯಕ್ರಮದ ಮೊದಲು ಮಿತ್ರ ಸಮಾಜ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು.

ಗುರುವಂದನಾ ಸಮಿತಿಯ ಗೌರವ ಸಲಹೆಗಾರ ಎನ್.ಕೆ.ಜಗನ್ನಿವಾಸ ರಾವ್ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಬಿ.ಐತ್ತಪ್ಪ ನಾಯ್ಕ್ ವಂದಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ವತಿಯಿಂದ ಕೃಷ್ಣರಾಜ ಭಟ್ಟರನ್ನು ಹಾಗೂ ಸುಬ್ರಹ್ಮಣ್ಯ ನಟ್ಟೋಜ ಅವರನ್ನು ಅಭಿನಂದಿಸಲಾಯಿತು. ಪ್ರತಿಷ್ಠಾನದ ಸಂಚಾಲಕ ತಿರುಮಲೇಶ್ವರ ಭಟ್ ಮಹಾಮಂಗಳಾರತಿ ನೆರವೇರಿಸಿದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top