ಪುತ್ತೂರು: ಜೀವನದಲ್ಲಿ ಎಡರುತೊಡರುಗಳು, ಜಯ-ಅಪಜಯಗಳು, ಸನ್ಮಾನ-ಅಪಮಾನಗಳು ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವುಗಳನ್ನು ಸ್ವೀಕರಿಸುವ ಮತ್ತು ಅದರಿಂದ ಪಾಠ ಕಲಿಯುವ ಸಾಧ್ಯತೆಗಳನ್ನು ಆರಿಸುವ ಸ್ವಾತಂತ್ರ್ಯ ಮಾತ್ರ ನಮಗಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ದೇವಿಚರಣ್ ರೈ ಹೇಳಿದರು.

ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಪ್ರತಿಭಾ ದಿನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು.
ಏಕಾಂತದಲ್ಲಿ ಕಣ್ಮುಚ್ಚಿ ನಮ್ಮ ಬಗ್ಗೆ ನಾವು ಯೋಚಿಸಿದಾಗ ನಮ್ಮ ಅಂತರಂಗವು ತೆರೆದುಕೊಳ್ಳುತ್ತದೆ ಮತ್ತು ಸಮಾಜದಲ್ಲಿ ನಮ್ಮ ಸ್ಥಾನ ಮಾನವನ್ನು ತಿಳಿದುಕೊಳ್ಳುವುದಕ್ಕೆ ಇದು ಸಹಕಾರಿಯಾಗುತ್ತದೆ ಎಂದರು. ನಮ್ಮ ಮಾನಸಿಕ ಸ್ಥಿತಿಗತಿಯ ಮೇಲೆ ನಮ್ಮ ಯಶಸ್ಸು ನಿರ್ಣಯಿಸಲ್ಪಡುತ್ತದೆ ಆದುದರಿಂದ ಉತ್ತಮ ಮನಸ್ಥಿತಿಯೊಂದಿಗೆ ಬದುಕಿ ಸಮಾಜದ ಉನ್ನತಿಗೆ ಸಹಕಾರಿಗಳಾಗಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಕಲಿಕೆ, ಕ್ರೀಡೆ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಮನಾಗಿ ಭಾಗವಹಿಸಿ ಅದನ್ನು ಸಮತೋಲನಗೊಳಿಸುತ್ತಾ ಹೋದರೆ ಉನ್ನತ ಜೀವನವನ್ನು ಪಡೆಯುವುದಕ್ಕೆ ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ಮಾಡಲಾಯಿತು. ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಹಿತ್ಯಿಕ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ಕಾಲೇಜಿನ ಸಾಂಸ್ಕೃತಿಕ ಕಲಾವೇದಿಕೆ ಭೂಮಿಕಾ ಕಲಾಸಂಘದ ನಿರ್ದೇಶಕ ಪ್ರೊ.ಸುದರ್ಶನ್.ಎಮ್.ಎಲ್, ವಿದ್ಯಾರ್ಥಿ ಪ್ರತಿನಿಧಿ ರಚನಾ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಹಿತೈಷಿ ಶೆಟ್ಟಿ ಸ್ವಾಗತಿಸಿ, ಸಂಕೇತ್ ವಂದಿಸಿದರು. ಸ್ನೇಹ, ನೀಕ್ಷಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.