ಕಡಬ ತಾಲೂಕಿನ ಕುದ್ಮಾರು ಗ್ರಾಮದ ನೂಜಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘ ಇದೀಗ ಸ್ಪಷ್ಟನೆ ನೀಡಿದೆ.
ನೂಜಿಯಲ್ಲಿ ಸ್ಥಳೀಯ ದೇವಸ್ಥಾನದ ಜೀರ್ಣೋದ್ದಾರಕ್ಕೆ ಬೇಕಾದ ಮರಳು ಸಂಗ್ರಹಿಸಿದ್ದು, ಗಣಿ ಇಲಾಖೆ ಮೂಲಕ ಸರಕಾರಕ್ಕೆ ರಾಜಧನ ಪಾವತಿಸಿಯೇ ಮರಳು ಸಂಗ್ರಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಒಳ ನುಸುಳಿದ್ದು, ವಿವಿಧ ರಾಜಕೀಯ ಮುಖಂಡರುಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೇಳಿ ಬರುತ್ತಿದೆ.
ಈ ಪ್ರಕರಣದಲ್ಲಿ ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಮೆದು ಅವರ ಮೇಲೆ ಉದ್ದೇಶ ಪೂರ್ವಕವಾಗಿ ದೂರು ದಾಖಲಿಸಲಾಗಿದೆ. ಇದು ಖಂಡನೀಯವಾಗಿದ್ದು ದಿನೇಶ್ ಮೆದು ಅವರನ್ನು ವಿನಃ ಕಾರಣ ಈ ವಿಚಾರಕ್ಕೆ ಎಳೆದು ತಂದಿದ್ದಾರೆ. ಈ ಮೂಲಕ ಅಧಿಕೃತವಾಗಿ ಮರಳುಗಾರಿಕೆ ಮಾಡುವವರಿಗೆ ಹಿನ್ನಡೆ ಉಂಟು ಮಾಡುವ, ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಇದಾಗಿದೆ.
ಮರಳುಗಾರಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭಾಗಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಸರಕಾರ ವಿವಿಧ ಪಕ್ಷದ ಮುಖಂಡರನ್ನು ಮಾತ್ರ ಟಾರ್ಗೆಟ್ ಮಾಡುವುದು ಎಷ್ಟು ಸರಿ. ಇಡೀ ಜಿಲ್ಲೆಯಲ್ಲೇ ಮರಳುಗಾರಿಕೆ ವಿಪರೀತವಾಗಿ ನಡೆಯುತ್ತಿದ್ದು, ಈ ಕುರಿತು ಪೊಲೀಸ್ ಇಲಾಖೆ ಸರಿಯಾದ ಕ್ರಮ ಈ ಮೊದಲೇ ತೆಗೆದುಕೊಳ್ಳಬೇಕಿತ್ತು. ಆದರೆ ಕೇವಲ ಒಂದು ಭಾಗದಲ್ಲಿ ಮಾತ್ರ ಈ ಕ್ರಮ ತೆಗೆದುಕೊಳ್ಳಲು ಕಾರಣವೇನು ?
ದಿನೇಶ್ ಮೆದು ಅವರು ಸಂಘದ ಅಧ್ಯಕ್ಷರಾಗಿ ಸಲಹೆ ಸಹಕಾರ ನೀಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಉಪಾಧ್ಯಕ್ಷ ಚರಣ್ ಜುಮಾದಿಗುಡ್ಡೆ ,ಕೋಶಾಧಿಕಾರಿ ಸುರೇಶ್ ಕುಂಡಡ್ಕ,ಪದಾಧಿಕಾರಿಗಳಾದ ಮೋನು ಪಿಲಿಗೂಡು, ಪಿಪಿ ಎಲಿಯಾಸ್ ಕಡಬ, ಪ್ರವೀಣ್ ಆಳ್ವ ಮಂಗಳೂರು ತಿಳಿಸಿದ್ದಾರೆ.