ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿರುವ 170 ಕೊಳವೆ ಬಾವಿಗಳ ನಿರ್ವಹಣೆಯನ್ನು ನಗರಸಭೆ ಈಗಾಗಲೇ ಜಲಸಿರಿ ಸುಪರ್ದಿಗೆ ನೀಡಿದ್ದ ಪರಿಣಾಮ ಎಲ್ಲೆಡೆ ಕುಡಿಯುವ ನೀರಿನ ಬವಣೆ ಉಂಟಾಗಿದೆ. ಈ ನಿಟ್ಟಿನಲ್ಲಿ 170 ಕೊಳವೆ ಬಾವಿಗಳ ನಿರ್ವಹಣೆಗೆ ಈ ಹಿಂದೆ ಇದ್ದ 31 ಪಂಪ್ ಆಪರೇಟರ್ ಗಳನ್ನು ಪುನಃ ನಿಯೋಜನೆ ಮಾಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್.ಮಹಮ್ಮದಾಲಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಲಸಿರಿ ಯೋಜನೆ ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೇ ನೀರಿನ ಸಮಸ್ಯೆಯ ಸಾಧಕ-ಬಾಧಕಗಳನ್ನು ಪರಿಶೀಲಿಸದೆ ನಗರಸಭೆ ನೀರು ಸರಬರಾಜು ನಿರ್ವಹಣೆಯನ್ನು ಸುಯೇಜ್ ಕಂಪೆನಿಗೆ (ಜಲಸಿರಿ) ಟ್ರಯಲ್ ಗೆ ನೀಡಿದ್ದು, ಜಲಸಿರಿಯವರು 170 ಕೊಳವೆ ಬಾವಿಗಳ ನೀರು ಒದಗಿಸುವ ನಿರ್ವಹಣೆ ಮಾಡುತ್ತಿದ್ದ 31 ಆಪರೇಟರ್ ಗಳನ್ನು ಕೈಬಿಟ್ಟು ಕೆಲವೇ ಕಲವು ಪಂಪ್ ಆಪರೇಟರ್ ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಪರಿಣಾಮ ನೀರು ಸರಿಯಾಗಿ ಸರಬರಾಜಾಗುತ್ತಿಲ್ಲ. ಅಲ್ಲದೆ ಹೊಸ ಯೋಜನೆಯಿಂದಲೂ ನೀರು ವಿತರಣೆ ಆಗುತ್ತಿಲ್ಲ. ಜನರಿಗೆ ಇತ್ತ ಕೊಳವೆ ಬಾವಿಯಿಂದ ಅತ್ತ ಜಲಸಿರಿ ಯೋಜನೆಯಿಂದ ನೀರು ಇಲ್ಲದಂತಾಗಿದೆ. ಇದಕ್ಕೆ ನೀರು ಸರಬರಾಜು ಹೊಣೆಹೊತ್ತ ಜಲಸಿರಿ ಹಾಗೂ ನಗರಸಭೆ ಪ್ರಮುಖ ಕಾರಣ ಎಂದು ಅವರು ಆರೋಪಿಸಿದರು.
ಜಲಸಿರಿ ಯೋಜನೆಯಿಂದ 24*7 ಕುಡಿಯಲು ನೀರು ಸರಬರಾಜು ಮಾಡುತ್ತೇವೆ ಎಂದು ಹೇಳಿದ್ದು, ದಿನಕ್ಕೆ ಒಂದು ಗಂಟೆ ನೀರು ಕೊಡಿ ಎಂದು ಜನ ಇದೀಗ ಅಲವತ್ತುಕೊಂಡಿರುವುದು ಒಂದೆಡೆಯಾದರೆ, ಜಲಸಿರಿ ಯೋಜನೆ ಸಂಪೂರ್ಣಗೊಂಡಿದೆ ಎಂದು ಹೇಳಿರುವ ಅಧಿಕಾರಿಗಳು, ಇದೀಗ ಇನ್ನೂ 46 ಕಿ.ಮೀ. ಉದ್ದಕ್ಕೆ ಪೈಪ್ ಲೈನ್ ಅಳವಡಿಸಬೇಕಾಗಿದೆ. ಇದಕ್ಕೆ ಅನುದಾನ ಒದಗಿಸುವಂತೆ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಮಾಹಿತಿಯಂತೆ ಜಲಸಿರಿ ಯೋಜನೆಯ 10 ವಲಯಗಳಲ್ಲಿ ಆಗುವ ವ್ಯವಸ್ಥೆ ಕೇವಲ ಮೂರು ವಲಯಗಳಲ್ಲಿ ಮಾತ್ರ ನೀರು ಸರಬರಾಜು ಆಗುತ್ತಿದ್ದು, ಉಳಿದ ಏಳು ವಲಯಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಪರಿಣಾಮ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.
ಹಿಂದೆ ಎಡಿಬಿ ಯೋಜನೆಯಲ್ಲಿ ಅನುಷ್ಠಾನಗೊಂಡ ಕುಡಿಯುವ ನೀರು ಯೋಜನೆ ವಿಫಲವಾಗಿದ್ದು, ಈಗಿನ ಜಲಸಿರಿ ಯೋಜನೆಯೂ ವಿಫಲವಾದಂತಾಗಿದೆ. ಯೋಜನೆ ತರುವುದು ಕಾಂಗ್ರೆಸ್, ಅದನ್ನು ಹಾಳು ಮಾಡುವುದು ಬಿಜೆಪಿಯವರು. 133 ಕೋಟಿ ರೂ.ನ ಜಲಸಿರಿ ಯೋಜನೆಯ ವಿಫಲಗೊಂಡರೆ ಅದರ ಸಂಪೂರ್ಣ ಜವಾಬ್ದಾರಿ ಬಿಜೆಪಿಯದ್ದಾಗಿದೆ ಎಂದು ಆರೋಪಿಸಿದ ಅವರು, ತಕ್ಷಣ ನೀರಿನ ಅಂಶ ಕಡಿಮೆ ಇರುವಲ್ಲಿ ಹೊಸದಾಗಿ ಕೊಳವೆಬಾವಿ ತೆರೆದು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದಲ್ಲಿ ಜಲಸಿರಿ ಹಾಗೂ ನಗರಸಭೆ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಂತಿ ಬಲ್ನಾಡು, ಮುಖೇಶ್ ಕೆಮ್ಮಿಂಜೆ, ವಿಕ್ಟರ್ ಪಾಯಸ್, ರಿಯಾಝ್ ಪರ್ಲಡ್ಕ ಉಪಸ್ಥಿತರಿದ್ದರು.